ನ್ಯೂಸ್ ನಾಟೌಟ್: ಬಸ್ ಏರಲು ಹೋಗಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುಳ್ಯದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಳ್ಯದ ಗಾಂಧಿನಗರದಲ್ಲಿ ಅಕ್ಟೋಬರ್ 6ರಂದು ಅಲೆಟ್ಟಿ ಗ್ರಾಮದ ಕೋಲ್ಚಾರ್ ಗ್ರಾಮದ ಅವಿವಾಹಿತ ಕರುಣಾಕರ (46 ವರ್ಷ) ನಿಂತಿದ್ದ ಬಸ್ ಏರುವುದಕ್ಕೆ ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಸ್ಥಳೀಯರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೇಳೆ ಅವರು ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ.
ನಂತರ ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಮನೆಗೆ ತಲುಪಿದ ನಂತರ ಅಂದರೆ ಅಕ್ಟೋಬರ್ 7 ರಂದು ಕರುಣಾಕರ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದ ಹಾಗೆ ಏರುಪೇರಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.