ನ್ಯೂಸ್ ನಾಟೌಟ್ : ಸುಳ್ಯದ ಡಾ ರೇಣುಕಾ ಪ್ರಸಾದ್ ಒಡೆತನದಲ್ಲಿದ್ದ ಕೆವಿಜಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮೇಲೆ ನಾವು ಯಾವುದೇ ದಬ್ಬಾಳಿಕೆ ಮಾಡಿಲ್ಲ, ಒತ್ತಡವನ್ನೂ ಹೇರಿಲ್ಲ ಎಂದು ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದರು ಸ್ಪಷ್ಟಪಡಿಸಿದ್ದಾರೆ.
ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪ್ರೊ. ರಾಮಕೃಷ್ಣ ಎ.ಎಸ್ ಅವರ ಕೊಲೆ ಕೇಸಿನ ಬಗೆಗಿನ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಡಾ.ರೇಣುಕಾ ಪ್ರಸಾದ್ ಸೇರಿದಂತೆ ಐವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಬೆನ್ನಲ್ಲೇ ಡಾ.ರೇಣುಕಾ ಪ್ರಸಾದ್ ಅವರ ಪತ್ನಿ ಜ್ಯೋತಿ ಆರ್. ಪ್ರಸಾದ್ ಶುಕ್ರವಾರ ಮಧ್ಯಾಹ್ನ (ಅಕ್ಟೋಬರ್ ೬) ತುರ್ತು ಪತ್ರಿಕಾಗೋಷ್ಟಿ ಕರೆದಿದ್ದರು. “ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಡಳಿತ ಮಂಡಳಿಯ ಕೆಲವರು ದಾಳಿ ನಡೆಸಿದ್ದಾರೆಂದು” ಆರೋಪಿಸಿದ್ದರು.
ಇದಕ್ಕೆ ಪತ್ರಿಕಾಗೋಷ್ಟಿ ಕರೆದು ಪ್ರತಿಕ್ರಿಯಿಸಿರುವ ಅಕಾಡೆಮಿ ಆಫ್ ಲಿಬರಲ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಅವರು, “ನಮ್ಮ ಪೂಜ್ಯರಾದ ದಿವಂಗತ ಡಾ ಕುರುಂಜಿ ವೆಂಕಟರಮಣ ಗೌಡರು ಹಲವು ವರ್ಷಗಳಿಂದ ಸುಳ್ಯದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡಿದ್ದಾರೆ. ಮೆಡಿಕಲ್ , ಆಯುರ್ವೇದ, ಇಂಜಿನೀಯರಿಂಗ್, ದಂತ ಮಹಾವಿದ್ಯಾಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಅಡಿಯಲ್ಲಿ ತಂದು ವ್ಯವಸ್ಥಿತವಾಗಿ ನೋಡಿಕೊಂಡಿದ್ದಾರೆ. ಇಂದಿಗೂ ನಾವು ಇದರ ಆಡಳಿತವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
ಆದರೆ ನಮ್ಮ ಸಂಸ್ಥೆಯ ಓರ್ವ ಸದಸ್ಯರಾದ ಡಾ ರೇಣುಕಾ ಪ್ರಸಾದ್ ಅವರು ನಮ್ಮ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪ್ರೊ. ರಾಮಕೃಷ್ಣ ಎ.ಎಸ್ ಕೊಲೆ ಕೇಸಿನಲ್ಲಿ ಇವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಆ ಪ್ರಕಾರವಾಗಿ ನಮ್ಮ ಸಂಘದ ಸಭೆಯ ನಿರ್ಣಯದ ಪ್ರಕಾರ ಎಲ್ಲ ಸಂಸ್ಥೆಗಳು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ವ್ಯಾಪ್ತಿಗೆ ಬರುತ್ತದೆ. ಈ ಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳ ಹಾಗೂ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿ ನಡೆಸಿಕೊಂಡು ಬರುವುದಕ್ಕೆ ಮಾರ್ಗದರ್ಶನ ಹಾಗೂ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಇತ್ತೀಚಿಗಿನ ವಿದ್ಯಮಾನಗಳ ಬಗೆಗೂ ಚರ್ಚಿಸಲಾಗಿದೆ. ಈ ವೇಳೆ ಶುಕ್ರವಾರ ನಾವು ಅವರ ಆಡಳಿತದಲ್ಲಿದ್ದ ಸಿಬ್ಬಂದಿ ಭೇಟಿಯಾಗಿ ಚರ್ಚೆ ಮಾಡಿದ್ದೇವೆ. ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಿಲ್ಲ. ಅಥವಾ ಒತ್ತಡ, ದಬ್ಬಾಳಿಕೆಯನ್ನೂ ಮಾಡಿಲ್ಲ. ಸಂಸ್ಥೆಯ ಹಿತ ದೃಷ್ಟಿ ಇಟ್ಟುಕೊಂಡು ಅವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಕೆ.ವಿ ಚಿದಾನಂದ ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮತ್ತಿತರರು ಉಪಸ್ಥಿತರಿದ್ದರು.