ನ್ಯೂಸ್ ನಾಟೌಟ್ : ವೈದ್ಯರ ನಿರ್ಲಕ್ಷ್ಯವೂ ಅಥವಾ ಪವಾಡವೋ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಅಸ್ಸಾಂ ರಾಜಧಾನಿ ಗುವ್ಹಾಟಿ ಆಸ್ಪತ್ರೆಯಲ್ಲಿ ಮಗು ಪವಾಡದಂತೆ ಬದುಕಿದ ಘಟನೆ ವರದಿಯಾಗಿದೆ.
ಮಗು ಜನನವಾದ ಬಳಿಕ ಎರಡು ದಿನ ಐಸಿಯೂನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಯಾವುದೇ ಚಲನವಲನ ಆಗಿಲ್ಲ. ಹೀಗಾಗಿ ವೈದ್ಯರು ಮಗು ಕೊನೆಯುಸಿರೆಳೆದಿದೆ ಎಂದು ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬಸ್ಥರು ದುಃಖದಿಂದಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಗುವ್ಹಾಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೆಡೆ ರಕ್ತ ಸ್ರಾವ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಂಡಿತ್ತು ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ತಕ್ಷಣವೇ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 3 ರ ರಾತ್ರಿ 10 ಗಂಟೆಗೆ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಜನ್ಮತಾಳಿದ ಗಂಡು ಮಗುವಿನ ತೂಕ ಕೇವಲ 500 ಗ್ರಾಂ ಆಗಿತ್ತು.
ಮಗುವಿನಲ್ಲಿ ಸಣ್ಣದಾದ ಎದೆಬಡಿತ ಹೊರತುಪಡಿಸಿದರೆ ಚಲನವಲನ ಇರಲಿಲ್ಲ. ಜನ್ಮತಾಳಿದ ಮಗು ಅಳಲಿಲ್ಲ. ಪರಿಶೀಲಿಸಿದ ವೈದ್ಯರು ಮಗುವಿನ ತಂದೆಯನ್ನು ಕರೆದು ಯಾವುದೇ ಚಲನವಲನ ಇಲ್ಲದ ಕಾರಣ ನಾವು ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ನೀಡಬೇಕಾಗಿದೆ ಎಂದಿದ್ದಾರೆ. ಬಳಿಕ ಬುಧವಾರ ಬೆಳಗ್ಗೆ ಮಗುವಿನಲ್ಲಿ ಯಾವುದೇ ಚಲನವಲನ ಇಲ್ಲದ ಕಾರಣ ಮಗು ಕೊನೆಯುಸಿರೆಳೆದಿದೆ ಎಂದು ವೈದ್ಯರು ಹೇಳಿದ್ದಾರೆ.
ಮಗುವನ್ನು ವೈದ್ಯರು ರತನ್ ದಾಸ್ ಹಾಗೂ ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ ಮಗುವಿನ ಮರಣ ಪ್ರಮಾಣಪತ್ರವನ್ನು ನೀಡಿದ್ದಾರೆ. ಇತ್ತ ಮಗುವಿನ ತಾಯಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಕುಟುಂಬಸ್ಥರು ದುಃಖದಿಂದಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಅಂತ್ಯಸಂಸ್ಕಾರದ ಅಂತಿಮ ಘಟ್ಟ ತಲಪುತ್ತಿದ್ದಂತೆ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡ ಕುಟುಂಬಸ್ಥರು ಆಸ್ಪತ್ರೆ ದೌಡಾಯಿಸಿದ್ದಾರೆ. ಸದ್ಯ ಈ ಮಗುವಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
ಇತ್ತ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ದ ದೂರು ದಾಖಲಿಸಿದ್ದಾರೆ. ಆಸ್ಪತ್ರೆ ನೀಡಿದ ಮರಣ ಪ್ರಮಾಣ ಪತ್ರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆ ನೀಡಿದ ಬಿಲ್, ವೈದ್ಯರ ಸಮ್ಮರಿ ಸೇರಿದಂತೆ ಎಲ್ಲವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.