ನ್ಯೂಸ್ ನಾಟೌಟ್ : ಗೆಳೆಯನಿಗೆ ದುಬಾರಿ ಗಿಫ್ಟ್ ನೀಡಲು 17ರ ಹುಡುಗನೋರ್ವ ಬೈಕ್ (Bike) ಕದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಬಾಲಾಪರಾಧ ಕಾಯ್ದೆಯಡಿ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಸ್ನೇಹಿತನ 18ನೇ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡಿ ಇಂಪ್ರೆಸ್ ಮಾಡಲು ಬಯಸಿದ್ದ. ಆದರೆ ಹಣವಿಲ್ಲದ ಕಾರಣ ಸುಲಭವಾಗಿ ಹಣ ಮಾಡಲು ಬೈಕ್ ಕಳ್ಳತನ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಈತ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕೊಂದನ್ನು ಎಗರಿಸಿದ್ದ (theft). ಇದಕ್ಕಾಗಿ ಈತ ಡುಪ್ಲಿಕೇಟ್ ಕೀ ಬಳಸಿದ್ದ. ನಂತರ ಸೌಂಡ್ ಬರದಂತೆ ಬೈಕ್ನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ನಂತರ ಸುರಕ್ಷಿತ ಜಾಗದಲ್ಲಿರಿಸಿದ್ದ ಆತ ಕದ್ದ ಬೈಕನ್ನು ಮಾರಲು ಗ್ರಾಹಕರನ್ನು ಹುಡುಕುತ್ತಿದ್ದ ಎನ್ನಲಾಗಿದೆ.
ಇತ್ತ ಬೈಕ್ ಮಾಲೀಕ ರಾಮ್ ಸಹರೆ ವಿಶ್ವಕರ್ಮ, ಮನೆ ಮುಂದೆ ನಿಲ್ಲಿಸಿದ್ದ ತಮ್ಮ ಬೈಕ್ ಕಾಣಿಸದೇ ಇರುವುದರಿಂದ ಆತಂಕಗೊಂಡು ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಹುಡುಗನೋರ್ವ ಬೈಕ್ ಎಗರಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಬಳಿಕ ಪೊಲೀಸರಿಗೆ (police) ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಬೈಕ್ ಕದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಸ್ಎಚ್ಒ ವಿಕ್ರಮ್ ಸಿಂಗ್ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆತ ತನ್ನ ಆತ್ಮೀಯ ಗೆಳೆಯನ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ಖರೀದಿಸಲು ಬೈಕ್ ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಸ್ನೇಹಿತನ ವಿರುದ್ಧವೂ ಕಳ್ಳತನ ಪ್ರಕರಣವಿದ್ದು, ಆತನಿಗೆ ಮಂಗಳವಾರಕ್ಕೆ 18 ವರ್ಷ ತುಂಬಿತ್ತು ಎನ್ನಲಾಗಿದೆ.
ಈತನ ಸ್ನೇಹಿತನೇ ಕಳ್ಳತನದ ಬಗ್ಗೆ ಈತನಿಗೆ ತರಬೇತಿ ನೀಡಿದ್ದ, ಕಳ್ಳತನದ ಬಗ್ಗೆ ತನಗೆ ತಿಳಿದಿದ್ದ ಎಲ್ಲಾ ತಂತ್ರಗಳನ್ನು ತನಗಿಂತ ಸಣ್ಣವನಾದ ಅಪ್ರಾಪ್ತ ಬಾಲಕನಿಗೆ ಆತನ ಸ್ನೇಹಿತ ಹೇಳಿಕೊಟ್ಟಿದ್ದ, ಆತನ ಪಾಲಿಗೆ ಈ ಗೆಳೆಯ ಕಳ್ಳತನದ ವಿಚಾರದಲ್ಲಿ ಗುರುವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.