ನ್ಯೂಸ್ ನಾಟೌಟ್ :10 ಸಾವಿರ ಹಣವನ್ನು ನೀಡಿ ಪತಿಯನ್ನು ಮಂಗಳೂರು ಬೀಚ್ಗೆ ಕರೆದುಕೊಂಡು ಹೋಗೆಂದು ಲವ್ವರ್ ಜತೆ ಕಳುಹಿಸಿ ಖತರ್ನಾಕ್ ಐಡಿಯಾ ಮಾಡಿ ಪತಿಯನ್ನು ಕೊಲೆಗೈದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ಕುಮಟಾ ತಾಲೂಕಿನ ಗಡಿ ಭಾಗದ ದೇವಿಮನೆ ಘಟ್ಟ ಭಾಗದ ಮಾಸ್ತಿಮನೆ ದೇವಸ್ಥಾನದ ಹಿಂಭಾಗದಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಕುಮಟಾ ಪೊಲೀಸರು (Kumta Police) ಪ್ರಕರಣ ಬೇಧಿಸುವಲ್ಲಿ ಮುಂದಾದರು.ಕೊನೆಗೆ ಯಶಸ್ವಿಯೂ ಆದರು.ಸದ್ಯ ಪೊಲೀಸರು ಗದಗ ಮತ್ತು ಬಾಗಲಕೋಟೆ (Bagalkote) ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಶುರಾಮ, ಬಾಗಲಕೋಟೆ ಮೂಲದ ರವಿ, ಕೊಲೆಯಾದ ವ್ಯಕ್ತಿಯ ಪತ್ನಿ ರಾಜಮಾ, ಗದಗ ಮೂಲದ ಬಸವರಾಜ್ ಬಂಧಿತರು.
ಸೆ.30 ರಂದು ಇಂತಹ ನಾಟಕೀಯ ಘಟನೆ ನಡೆದಿದೆ.ಬಾಗಲಕೋಟೆ ಮೂಲದ ಬಶೀರ್ ಸಾಬ್ ಎಂಬಾತನನ್ನು ಮಂಗಳೂರಿಗೆ ಬೀಚ್ ನೋಡುವ ಹೆಸರಿನಲ್ಲಿ ಪತ್ನಿ ರಾಜಮಾ 10 ಸಾವಿರ ಹಣ ನೀಡಿ ತಾನು ಅಕ್ರಮ ಸಂಬಂಧ ಹೊಂದಿದ್ದ ಪರಶುರಾಮನೊಂದಿಗೆ ಕಳುಹಿಸಿ ಕೊಟ್ಟಿದ್ದಾಳೆ. ಈ ಬಗ್ಗೆ ಏನೂ ಅರಿಯದ ಪತಿರಾಯ ಬಶೀರ್ ಸಾಬ್ ಪತ್ನಿಯ ಪ್ರಿಯಕರನೊಂದಿಗೆ ಮಂಗಳೂರಿಗೆ ತೆರಳಿದ್ದ.ಮಂಗಳೂರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಪರಶುರಾಮ ತನ್ನ ದೊಡ್ಡಮ್ಮನ ಮಗ ರವಿ, ಬಸವರಾಜ್ ಜೊತೆಯಾಗಿದ್ದಾರೆ.
ನಂತರ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟದಲ್ಲಿ ಬಶೀರ್ ಸಾಬ್ ನೊಂದಿಗೆ ಇವರು ಇಳಿದು ದೇವಸ್ಥಾನದ ಹಿಂಭಾಗದಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಪರಶುರಾಮ, ಬಶೀರ್ ಸಾಬ್ಗೆ ಹಿಂಭಾಗದಿಂದ ಕಟ್ಟಿಗೆಯಲ್ಲಿ ಹೊಡೆದು ಸಾಯಿಸಿ ಅಲ್ಲಿಯೇ ಕಾಡಿನಲ್ಲಿ ಶವ ಹಾಕಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮೃತ ದೇಹ ಪತ್ತೆಯಾಗುತ್ತಿದ್ದಂತೆ ಜಾಡು ಹಿಡಿದು ಹೊರಟಾಗ ನಾಲ್ವರು ಸಿಕ್ಕಿ ಬಿದ್ದಿದ್ದಾರೆ. ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಕೊಲೆಯಾದ ಬಶೀರ್ ಸಾಬ್ ಪತ್ನಿ ರಾಜಮ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ವಹಿಸಲಾಗಿದೆ.ಕಾರ್ಯಾಚರಣೆಯಲ್ಲಿ ಕುಮಟಾ ಪಿ.ಎಸ್.ಐ ನವೀನ್ ನಾಯ್ಕ್, ಕುಮಟಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಪಿ.ಎಸ್.ಐ ಸಂಪತ್ , ಸಿಬ್ಬಂದಿ ಗಣೇಶ್ ನಾಯ್ಕ್, ಗುರು ನಾಯ್ಕ್, ಪ್ರದೀಪ್ ನಾಯ್ಕ್, ಲೋಕೇಶ್, ರಾಜು ನಾಯ್ಕ್, ನಿರಂಜನ್ ಸೇರಿದಂತೆ ಇತರರು ಭಾಗಿಯಾಗಿದ್ದರು.