ನ್ಯೂಸ್ ನಾಟೌಟ್ :ಸುಳ್ಯದಲ್ಲಿ ಇಂದು ಬೆಳಗ್ಗಿನಿಂದಲೇ(ಅ.03,ಮಂಗಳವಾರ) ಬ್ಯಾನರ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಅದಕ್ಕೆ ಕಾರಣ ಸುಳ್ಯದಲ್ಲಿ ಅಳವಡಿಸಲಾಗಿದ್ದ ಸೌಜನ್ಯ ಪರ ಬ್ಯಾನರ್ನ್ನು ನ.ಪಂ. ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಅದರಲ್ಲೂ ಒಗ್ಗಲಿಗರ ಸಂಘ ಇದನ್ನು ತೀವ್ರವಾಗಿ ವಿರೋಧಿಸಿತ್ತು.ಬ್ಯಾನರ್ ಹಾಕುವುದಕ್ಕೆ ನಗರ ಪಂಚಾಯತ್ನಿಂದ ಅನುಮತಿ ಪಡೆದಿದ್ದರೂ ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳ ನಡೆಗೆ ಒಗ್ಗಲಿಗರ ಸಂಘ ಖಂಡನೆ ವ್ಯಕ್ತ ಪಡಿಸಿತ್ತು.ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತ್ತು.ಇದೀಗ ದಿಢೀರ್ ಬೆಳವಣಿಗೆ ಎಂಬಂತೆ ಅದೇ ಸ್ಥಳದಲ್ಲಿ ಸೌಜನ್ಯ ಪರ ಬ್ಯಾನರ್ನ್ನು ಸಂಘಟಕರು ಅಳವಡಿಸಿದ್ದಾರೆ..!
ಅ.8ರಂದು ಸುಳ್ಯ ತಾಲೂಕಿನ ಐವರ್ನಾಡು ಎಂಬಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.ಈ ಬಗ್ಗೆ ಸುಳ್ಯದಲ್ಲಿ ಸೌಜನ್ಯ ಪರ ಬ್ಯಾನರ್ ಅಳವಡಿಸಲಾಗಿತ್ತು.ಆದರೆ ಜ್ಯೋತಿ ವೃತ್ತದ ಬಳಿ ಅಳವಡಿಸಲಾಗಿದ್ದ ಬ್ಯಾನರ್ನ್ನು ಇಂದು ಮುಂಜಾನೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರ ಪಂಚಾಯತ್ ಅಧಿಕಾರಿಗಳ ಮೂಲಕ ಮಾಡಲಾಯಿತು.ಆದರೆ ಆ ಬ್ಯಾನರ್ನ್ನು ಮತ್ತೆ ಅದೇ ಸ್ಥಳದಲ್ಲಿ ಸಂಘಟಕರು ನ.ಪಂ.ನಿಂದ ವಾಪಾಸ್ ಪಡೆದು ಅಳವಡಿಸಿದ ಘಟನೆ ನಡೆದಿದೆ.
ಈ ಕುರಿತಂತೆ ಬ್ಯಾನರ್ಗಾಗಿ ನಗರ ಪಂಚಾಯತ್ನಿಂದ ಅನುಮತಿ ಪಡೆದ ಕೆಲ ದಾಖಲೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.ಸೆ.26ರಂದು ನಗರ ಪಂಚಾಯತ್ನ ಅನುಮತಿ ಪಡೆದು ಈ ಫ್ಲೆಕ್ಸನ್ನು ಸೌಜನ್ಯ ಪರ ಹೋರಾಟ ಸಮಿತಿಯು ಅಳವಡಿಸಿತ್ತು.ಬ್ಯಾನರ್ ಅಳವಡಿಸಿ ಇಂದಿಗೆ 7 ದಿನಗಳಾಯಿತು.ಆದರೆ ಏಕಾಏಕಿ ಈ ಬ್ಯಾನರ್ನ್ನು ತೆರವುಗೊಳಿಸಿದ್ದು ಆಕ್ರೋಶಕ್ಕೂ ಕಾರಣವಾಗಿತ್ತು.
ಮತ್ತೊಂದೆಡೆ ಗಾಂಧಿಜಯಂತಿ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ಸಮಿತಿ ವತಿಯಿಂದ ಬೃಹತ್ ಜನಜಾಗೃತಿ ಜಾಥಾ ಮತ್ತು ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಸುಳ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಪೊಲೀಸರ ಸಲಹೆಯಂತೆ ನ.ಪಂ.ನವರು ಜ್ಯೋತಿ ಸರ್ಕಲ್ ಬಳಿ ಇದ್ದ ಆ ಬ್ಯಾನರ್ನ್ನು ಅಲ್ಲಿಂದ ತೆರವು ಮಾಡಿದ್ದರು.ಈ ಬಗ್ಗೆ ಬೆಳಗ್ಗಿನಿಂದಲೇ ಪರ-ವಿರೋಧದ ಚರ್ಚೆಗಳು ನಡೆದವು. ಬ್ಯಾನರ್ನ್ನು ಅಳವಡಿಸಿದ್ದ ಪ್ರತಿಭಟನಾ ಸಭೆಯ ಸಂಘಟಕರು ನ.ಪಂ.ನವರ ನಡೆಯನ್ನು ಪ್ರಶ್ನಿಸಿದ್ದರೆನ್ನಲಾಗಿದ್ದು,ಇದೀಗ ಮತ್ತೆ ಸಂಘಟಕರು ಅದೇ ಸ್ಥಳದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.