ನ್ಯೂಸ್ ನಾಟೌಟ್ :ಅತ್ಯಂತ ದುಬಾರಿ ಕಾರುಗಳನ್ನು ಖರೀದಿಸಬೇಕು,ಅದರಲ್ಲಿ ಪ್ರಯಾಣಿಸಬೇಕೆಂಬುದು ಹಲವರ ಕನಸಾಗಿರುತ್ತೆ.ಆದರೆ ಬಡವರಿಗೆ ಇದು ಅಸಾಧ್ಯ.ಆದರೆ ಇಲ್ಲೊಬ್ಬ ಯುವಕ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಾರಿನ ಮಾದರಿಯನ್ನೇ ಬರಿ 45,000 ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾನೆ ಅಂದರೆ ಎಲ್ಲರೂ ಅಚ್ಚರಿ ಪಡಬೇಕಾದ ವಿಚಾರ..!
ಹಾಗಾದರೆ ಈ ಕಾರನ್ನು ಅತೀ ಕಡಿಮೆ ಖರ್ಚಿನಲ್ಲಿ ಹೇಗೆ ತಯಾರಿಸಿದ?ಆ ಹುಡುಗ ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಅಚ್ಚರಿಗೊಳಿಸುವಂತೆ ಮಾಡಿದೆ.ಕೇರಳದ ಯುವಕನೊಬ್ಬ ಮಾರುತಿ 800 ಕಾರನ್ನು ಬಳಸಿ ಕೇವಲ 45,000 ಖರ್ಚು ಮಾಡಿ ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರಿನ ಮಾದರಿಯನ್ನೇ ನಿರ್ಮಾಣ ಮಾಡಿದ್ದಾನೆ, ಅಲ್ಲದೆ ಯುವಕನ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.ಈ ಯುವಕ ತನ್ನ ಮನೆಯಲ್ಲೇ ಈ ಕಾರನ್ನು ತಯಾರಿಸಿದ್ದು ಅದಕ್ಕೆ ಬೇಕಾದ ವಸ್ತುಗಳನ್ನು ತಾನೇ ಸಿದ್ಧ ಪಡಿಸಿದ್ದಾನೆ.
ಈ ಯುವಕ ಕೆಲವೊಂದನ್ನು ಅಟೋಮೊಬೈಲ್ ಅಂಗಡಿಗಳಲ್ಲಿ ಬಿಡಿಭಾಗಗಳನ್ನು ಪಡೆದುಕೊಂಡು ಅತ್ಯಾಕರ್ಷಕವಾಗಿ ಕಾರನ್ನು ವಿನ್ಯಾಸಗೊಳಿಸಿದ್ದು ಅದ್ಭುತವಾಗಿದೆ.ಹೊರಭಾಗದಲ್ಲಿ ನೋಡುವಾಗ ರೋಲ್ಸ್ ರಾಯ್ಸ್ ಕಾರಿನಂತೆ ಕಾಣುವಂತೆ ವಿನ್ಯಾಸಗೊಳಿಸಿದ್ದಾನೆ. ಬಳಿಕ ಅದಕ್ಕೆ ಸೂಕ್ತವಾದ ಹೆಡ್ ಲೈಟ್, ಲೋಗೋ ನಿರ್ಮಾಣ ಮಾಡಿದ್ದಾನೆ.
ಮಕ್ಕಳ ಆಟಿಕೆ ಸಾಮಗ್ರಿಯಲ್ಲಿ ಸಿಗುವ ರೋಲ್ಸ್ ರಾಯ್ಸ್ ಲೋಗೋವನ್ನು ಇದಕ್ಕೆ ಬಳಕೆ ಮಾಡಲಾಗಿದೆ. ಹೊರಗಿನ ಭಾಗಕ್ಕೆ ಸ್ಟೀಲ್ ಶೀಟ್ ಗಳನ್ನು ಬಳಸಲಾಗಿದೆ. ಅದರಂತೆ ಕಾರಿನ ಒಳ ಭಾಗವನ್ನು ಬಿ.ಎಂ. ಡಬ್ಲ್ಯೂ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಅತ್ಯಾಕರ್ಷಕವಾಗಿದೆ.
ಅಂದ ಹಾಗೆ ಇದನ್ನು ವಿನ್ಯಾಸಗೊಳಿಸಿದ್ದು ಕೇರಳದ ಹತೀಫ್ ಎಂಬ ಯುವಕ.ಹತೀಫ್ ಅವರು ಈ ರೀತಿಯ ವಿಶಿಷ್ಟ ಕಾರುಗಳನ್ನು ರಚಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಅಂತಹ ಹಲವಾರು ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಲಾಗ್ತ ಇದೆ.ಇತ್ತೀಚೆಗಂತೂ ಅವರು ಮೋಟಾರ್ ಸೈಕಲ್ ಇಂಜಿನ್ ಇರುವ ಜೀಪ್ ಕಂಪನಿ ಕಾರನ್ನು ಸಿದ್ಧಪಡಿಸಿದ್ದರು ಇದಕ್ಕೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.