ಸುಳ್ಯ: ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸುವುದು ಕಷ್ಟ. ನಮ್ಮ ದೇಶದಲ್ಲಿ ಗುರುವಿಗೆ ಭಾವನಾತ್ಮಕವಾದ ಸ್ಥಾನಮಾನ ನೀಡಿದ್ದೇವೆ. ಅದ್ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ತೀರ ಹದಗೆಡುತ್ತಿದೆಯೇ? ಎನ್ನುವ ಆತಂಕ ಕಾಡುತ್ತಿದೆ. ಪಾಶ್ಚಿಮಾತ್ಯದ ಪ್ರಭಾವಕ್ಕೆ ಒಳಗಾದ ನಮ್ಮ ಮಕ್ಕಳು ಈಗೀಗ ‘ಗುರು ಏನು ಮಹಾ’? ಎಂದು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಸುತ್ತಮುತ್ತಲಿನ ವಾತಾವರಣ ಬದಲಾಗಿದೆ. ಯಸ್…ಸುಳ್ಯದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಕಾಲೇಜು ಮಕ್ಕಳು ಗುಂಪು ಕಟ್ಟಿಕೊಂಡು ಬಡಿದಾಡಿಕೊಳ್ಳುವುದಿದೆ. ಕೊನೆಗೆ ಪ್ರಾಂಶುಪಾಲರಿಂದ ಡಿಬಾರ್ ಆಗಿರುವ ಅದೆಷ್ಟೋ ಪ್ರಕರಣಗಳಿವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ವಿದ್ಯೆ ಕಲಿಸಿದ ಉಪನ್ಯಾಸಕಿಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಡಿಬಾರ್ ಆಗಿದ್ದಾನೆ. ಸುಳ್ಯದ ಪ್ರತಿಷ್ಠಿತ ಕಾಲೇಜ್ ವೊಂದರಲ್ಲಿ ಘಟನೆ ನಡೆದಿದೆ.
ಪಶ್ಚಾತಾಪವಿಲ್ಲದ ವಿದ್ಯಾರ್ಥಿ..!
ವಾರಗಳ ಹಿಂದೆ ಉಪನ್ಯಾಸಕಿಯೊಬ್ಬರು ಪಾಠ ಮಾಡಲೆಂದು ಪದವಿ ಕ್ಲಾಸ್ ರೂಂಗೆ ಬಂದಿದ್ದಾರೆ. ಈ ವೇಳೆ ಅದೇನಾಯ್ತೋ ಗೊತ್ತಿಲ್ಲ. ವಿದ್ಯಾರ್ಥಿಯೊಬ್ಬನ ಮಾತು ಕೇಳಿ ಉಪನ್ಯಾಸಕಿ ಇದ್ದಕ್ಕಿದ್ದಂತೆ ಕಣ್ಣೀರು ಹಾಕುತ್ತಾ ಅರ್ಧಕ್ಕೆ ಕ್ಲಾಸ್ ಮೊಟಕುಗೊಳಿಸಿ ಹೊರ ನಡೆದರು. ಆಫೀಸ್ ಕೋಣೆಯೊಳಗೂ ಉಪನ್ಯಾಸಕಿ ಅಳುತ್ತಲೇ ಇದ್ದರು. ಸಹ ಸಿಬ್ಬಂದಿ ಅವರನ್ನು ಎಷ್ಟು ಸಮಾಧಾನ ಪಡಿಸಿದರೂ ಮನಸ್ಸಿಗಾದ ಗಾಯ ಕಡಿಮೆ ಆಗಿರಲಿಲ್ಲ. ಉಪನ್ಯಾಸಕಿಯ ಅಳು ನಿಂತಿರಲಿಲ್ಲ. ಕೊನೆಗೆ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅಂತಿಮವಾಗಿ ಆತ ತಪ್ಪು ಮಾಡಿದ್ದಾನೆ ಎನ್ನುವುದು ಖಾತ್ರಿಯಾದ ಬಳಿಕ ಡಿಬಾರ್ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿ ಮನೆಗೆ ಹೋಗಿ ಅಪ್ಪ-ಅಮ್ಮನನ್ನು ಕರೆದುಕೊಂಡು ಬಂದಿದ್ದಾನೆ. ತನ್ನ ತಪ್ಪಿನ ಬಗ್ಗೆ ಸ್ವಲ್ಪವೂ ವಿಷಾದವಿಲ್ಲದ ಆ ಹುಡುಗನಿಗೆ ಅಪ್ಪ-ಅಮ್ಮನ ಬೆಂಬಲ ಬೇರೆ..! ಉಪನ್ಯಾಸಕಿಗೆ ಕೆಟ್ಟದಾಗಿ ಬೈದ ಮಗನನ್ನು ಜೋರು ಮಾಡಿ ತಿದ್ದಿ ಓದಲು ಬುದ್ದಿ ಹೇಳುವುದು ಬಿಟ್ಟು ಪ್ರಾಂಶುಪಾಲರ ಜತೆಗೆ ಹುಡುಗನ ಅಪ್ಪ -ಅಮ್ಮ ಗಲಾಟೆಗೆ ನಿಂತರು. ಕಚೇರಿ ಕೋಣೆಯಿಂದ ಜೋರಾದ ಕಿರುಚಾಟ-ಅರಚಾಟಗಳು ಕೇಳಿ ಬಂದವು. ಸದ್ಯ ವಿದ್ಯಾರ್ಥಿ ಡಿಬಾರ್ ಆಗಿದ್ದಾನೆ ಎಂದು ಕಾಲೇಜು ಮೂಲಗಳು ತಿಳಿಸಿವೆ.