ನ್ಯೂಸ್ ನಾಟೌಟ್: ತುಳುನಾಡಿನ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸುವ ಉದ್ದೇಶದಿಂದ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ಕಂಬಳ ಕೂಟವನ್ನು ಆಯೋಜನೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳವನ್ನು ಆಯೋಜಿಸುತ್ತಿರುವುದು ವಿಶೇಷವಾಗಿದೆ. ಕಂಬಳದ ಪ್ರಮುಖ ಆಕರ್ಷಣೆಯಾಗಿ ಬಾಲಿವುಡ್ ನಟಿ ತುಳುನಾಡಿನ ಮಗಳು ಐಶ್ವರ್ಯಾ ರೈ, ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್, ನಟ-ನಿರ್ದೇಶಕ ರಿಷಭ್ ಶೆಟ್ಟಿ, ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಬಾಲಿವುಡ್, ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕಂಬಳವನ್ನು ಭಾರಿ ದೊಡ್ಡ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಸುಮಾರು ಎಂಟು ಲಕ್ಷ ಜನರು ಕಂಬಳವನ್ನು ವೀಕ್ಷಿಸುವುದಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಇನ್ನು ಮತ್ತೊಂದೆಡೆ ತಮ್ಮ ಹೆಸರಿನಲ್ಲಿ ಒಂದು ಜೊತೆ ಕೋಣ ಓಡಿಸುವಂತೆ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಸುಧಾಕರ್ ಸೇರಿ ಹಲವು ಸಚಿವರು ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕೋಣ ಕೊಡಲು ಕೋಣದ ಮಾಲೀಕರು ಒಪ್ಪುತ್ತಿಲ್ಲ. ಪ್ರತಿಷ್ಠೆಗೆ ನಡೆಯುವ ಕಂಬಳದಲ್ಲಿ ತಮ್ಮ ಕೋಣಗಳನ್ನು ಬೇರೆಯವರ ಹೆಸರಿಗೆ ಕೊಡಲು ಕೋಣ ಮಾಲೀಕರು ನಕಾರ ಮಾಡುತ್ತಿದ್ದಾರೆ. ಕಂಬಳ ಸಮಿತಿ ಸಭೆಯಲ್ಲಿ ಕೋಣ ಕೊಡಲು ನಿರಾಕರಿಸಿದ್ದಾರೆ ಎಂದು ಅಶೋಕ್ ರೈ ಹೇಳಿದರು.
ಕಂಬಳ ಪೂರ್ವಭಾವಿ ಸಭೆಯಲ್ಲಿ ಕೋಣಗಳ ಮಾಲೀಕರು ಕೋಣಗಳಿಗೆ ಕುಡಿಯುವ ನೀರಿನಲ್ಲೂ ಡಿಮ್ಯಾಂಡ್ ಮಾಡಿದ್ದಾರೆ. ಹೀಗಾಗಿ ಕೋಣಗಳಿಗೆ ಕುಡಿಯಲು ಮಿನರಲ್ ವಾಟರ್ ಕೊಡಿಸುವುದಾಗಿ ಸಮಿತಿ ಹೇಳಿದೆ. ಆದರೆ ಅದಕ್ಕೊಪ್ಪದ ಮಾಲೀಕರು ಕರಾವಳಿಯ ನೀರನ್ನೇ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಟ್ಯಾಂಕರ್ಗಳ ಮೂಲಕ ಕರಾವಳಿಯ ನೀರನ್ನು ಬೆಂಗಳೂರಿಗೆ ತರಲು ಚಿಂತನೆ ನಡೆದಿದೆ. ಇದರ ಜೊತೆಗೆ ಪಶು ಆಂಬುಲೆನ್ಸ್, ಪಶು ವೈದ್ಯಾಧಿಕಾರಿಗಳ ಜೊತೆ ಲಾರಿಗಳ ಮೂಲಕ ಕೋಣಗಳನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಸಿದ್ಧತೆ ನಡೆದಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100 ಜೋಡಿಗೂ ಅಧಿಕ ಕೋಣಗಳು ಬೆಂಗಳೂರಿಗೆ ಆಗಮಿಸಲಿವೆ. ಮಂಗಳೂರಿನಿಂದ ಮೆರವಣಿಗೆ ಮೂಲಕ ಕೋಣಗಳನ್ನು ಬೀಳ್ಕೊಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ಹೇಳಿದರು.