ನ್ಯೂಸ್ ನಾಟೌಟ್ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ಇದರ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ , ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯಲಿದೆ.ಈ ಪ್ರಯುಕ್ತ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದು, ಹೆಚ್ಚಿನ ಜನರು ಸೇರ ಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ . ಜಿಲ್ಲೆ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಸುಳ್ಯದ ಅಮರಶ್ರೀಬಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 02 ಗಾಂಧಿ ಜಯಂತಿಯ ಪ್ರಯುಕ್ತ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಸಮಾರಂಭವನ್ನು ಆಕ್ಟೋಬರ್ 3ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಕು|ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮಗುರು ರೆ. ಫಾ. ವಿಕ್ಟರ್ ಡಿಸೋಜ ಶುಭ ಸಂದೇಶ ನೀಡಲಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಎಲ್.ಹೆಚ್.ಮಂಜುನಾಥ್ ಆಶಯ ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಶಂಕರಪ್ಪ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು ಡಾ. ಕೆ.ವಿ ರೇಣುಕಾ ಪ್ರಸಾದ್ ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು, ಪ್ರೊಫೆಸರ್ ಯೂಸುಫ್ ಪೈಚಾರು ನಿವೃತ್ತ ಪ್ರಾಂಶುಪಾಲರು, ನೆಹರು ಆರ್ಟ್ಸ್ ಸೈನ್ಸ್ ಕಾಮರ್ಸ್ ಕಾಲೇಜು ಹುಬ್ಬಳ್ಳಿ,ಆರ್ ಬಿ ಹೆಬ್ಬಳ್ಳಿ, ಉದ್ಯಮಿಗಳು ಮುಂಬೈ, ಎಂ. ಹೆಚ್ ಸುಧಾಕರ ಮುಖ್ಯಾಧಿಕಾರಿ ನಗರ ಪಂಚಾಯತ್ ಸುಳ್ಯ ಭಾಗವಹಿಸಲಿದ್ದಾರೆ. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರು, ಉಡುಪಿ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಸುಳ್ಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಉಪಸ್ಥಿತಿರಿರುವರು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಯವರು ಮಾಹಿತಿ ನೀಡಿದರು.
ರಾಜ್ಯಾದ್ಯಂತ 108 ಕಾರ್ಯಕ್ರಮಗಳ ಆಯೋಜನೆ:ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಧರ್ಮಾಧಿಕಾರಿಯವರ ಕಲ್ಪನೆಯಲ್ಲಿ ಗಾಂಧೀಜಿಯವರ ಜನ್ಮ ದಿನಾಚರಣೆಯಂದು ವಿಶೇಷವಾಗಿ ಗಾಂಧಿವೃತ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ವಿಚಾರ ಧಾರೆಗಳನ್ನು ತಿಳಿಯಪಡಿಸುವ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತರ ಸಮಾವೇಶ, ಮಹಿಳಾ ಸಮಾವೇಶಗಳನ್ನು ಹಮ್ಮಿಕೊಂಡು ವ್ಯಾಪಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ರಾಜ್ಯದಲ್ಲಿ ಈ ಜಿಲ್ಲಾ ವೇದಿಕೆಗಳನ್ನು ರಚಿಸಲಾಗಿದ್ದು, ಈ ಮೂಲಕ ಗಾಂಧೀಜಿಯವರ ಜನ್ಮ ದಿನಾಚರಣೆಯಂದು ವಿಶೇಷವಾಗಿ ಗಾಂಧಿವೃತ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ವಿಚಾರ ಧಾರೆಗಳನ್ನು ತಿಳಿಯಪಡಿಸುವ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತರ ಸಮಾವೇಶ, ಮಹಿಳಾ ಸಮಾವೇಶಗಳನ್ನು ಹಮ್ಮಿಕೊಂಡು ವ್ಯಾಪಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯವನ್ನು ರೂಪಿಸಲಾಗಿದೆ.ರಾಜ್ಯದಾದ್ಯಂತ ತಾಲೂಕು ಮತ್ತು ಜಿಲ್ಲಾಮಟ್ಟದ 108 ಕಾರ್ಯಕ್ರಮಗಳನ್ನು ಅಕ್ಟೋಬರ್ 15ರೊಳಗೆ ನಡೆಸಲಾಗುವುದು.
ಇನ್ನು ಸಮಾವೇಶದ ಜಾಥಾವು ಬೆಳಗ್ಗೆ ಗಂಟೆ 9.30 ರಿಂದ ಸುಳ್ಯದ ಜ್ಯೋತಿ ವೃತ್ತದಿಂದ ಪ್ರಾರಂಭಗೊಳ್ಳಲಿದೆ.ಇದಾದ ಬಳಿಕ ಮುಖ್ಯ ರಸ್ತೆಯ ಮೂಲಕ ಸಭಾಭವನದ ತನಕ ಸಾಗಿ ಬರಲಿದೆ. ಜಾಥಾದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಾಲೂಕಿನ ಭಜನಾ ತಂಡಗಳು, ನವಜೀವನ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಜನಜಾಗೃತಿ ಸಮಿತಿಯ ಸದಸ್ಯರು ಹಾಗೂ ಯೋಜನೆಯ ಸಂಘದ ಸದಸ್ಯರು ಒಟ್ಟು ಸೇರಿ ಸಾವಿರಾರು ಮಂದಿ ಭಾಗವಹಿಸಲಿರುವುದಾಗಿ ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ವ್ಯಸನ ಮುಕ್ತ ರನ್ನು ಗುರುತಿಸಿ ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಆಪದ್ಭಾಂದವರಿಗೆ ಶೌರ್ಯ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಜ್ಞಾನವಿಕಾಸ ಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮ, ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ, ಮದ್ಯಮುಕ್ತ ರಾಜ್ಯಕ್ಕಾಗಿ ಹಕ್ಕೊತ್ತಾಯ ಮಂಡನೆ, ಮುಂತಾದ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು,ವಿಶೇಷತೆಯಿಂದ ಕೂಡಿರಲಿದೆ.ನವಜೀವನ ಸಾಧಕ ಪ್ರಶಸ್ತಿ ವಿತರಣೆಯನ್ನು ಧರ್ಮಾಧಿಕಾರಿಯವರು ನೆರವೇರಿಸಲಿದ್ದಾರೆ. ಎಂದು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ವಿವರ ನೀಡಿದರು.
ತಾಲೂಕು ಜನಜಾಗೃತಿ ವೇದಿಕೆಯ ಮೂಲಕ ಸುಳ್ಯ ತಾಲೂಕಿನ ಅಡಿಕೆ ಬೆಳೆಗಾರರ ಸಮಸ್ಯೆಗಳಲ್ಲೊಂದಾದ ಹಳದಿ ರೋಗ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಭೆ ಸದಸ್ಯರಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಸಮಾವೇಶದಲ್ಲಿ ವೇದಿಕೆಯ ಮೂಲಕ ಮನವಿ ನೀಡಲಾಗುವುದು ಎಂದು ವೇದಿಕೆಯ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ತಿಳಿಸಿದರು.
ಕಾರ್ಯಕ್ರಮದ ಪೂರ್ವ ಸಿದ್ಧತೆಯು ಯೋಜನೆಯ ಮೂಲಕ ನಿರ್ವಹಿಸಲಾಗುತ್ತಿದೆ. ವಲಯದ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಉಪ ಸಮಿತಿಗಳನ್ನು ರಚಿಸಲಾಗಿದ್ದು ವಲಯ ಮಟ್ಟದಲ್ಲಿ ಎಲ್ಲಾ ರೀತಿಯ ಜವಾಬ್ದಾರಿ ವಹಿಸಲಾಗಿದೆ ಎಂದು ಯೋಜನಾಧಿಕಾರಿಯಾದ ನಾಗೇಶ್ ಪಿ ಈ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್.ಎ.ರಾಮಚಂದ್ರ , ಪ್ರವೀಣ್ ಕುಮಾರ್ , ಲೋಕನಾಥ್ ಅಮೆಚೂರ್ , ಸುರೇಶ್ ಕಣೆಮರಡ್ಕ , ಪದ್ಮನಾಭ ಶೆಟ್ಟಿ , ನಾಗೇಶ್ ಪೈ, ಬೂಡು ರಾಧಕೃಷ್ಣ ರೈ , ರಮೇಶ್ ಮತ್ತಿತರರು ಉಪಸ್ಥಿತರಿದ್ದರು.