ನ್ಯೂಸ್ ನಾಟೌಟ್: ಭಾರತಕ್ಕೆ (Terrorism To India) ‘ಭಯೋತ್ಪಾದನೆ’, ಚೀನಾಗೆ ಕತ್ತೆಗಳ (Donkeys to China) ರಫ್ತು ಮಾಡುವ ಮೂಲಕ ಕುಖ್ಯಾತಿ ಗಳಿಸಿಕೊಂಡಿದ್ದ ಪಾಕಿಸ್ತಾನ ಇದೀಗ ತನ್ನ ದೇಶದಲ್ಲಿರುವ ಭಿಕ್ಷುಕರನ್ನೇ ರಫ್ತು ಮಾಡಿ ಸುದ್ದಿಯಾಗಿದೆ.
ಹೌದು, ಪಾಕಿಸ್ತಾನದಲ್ಲಿ ಭಿಕ್ಷುಕರ ಹಾವಳಿ ಭಾರಿ ಹೆಚ್ಚಾಗಿದೆಯಂತೆ ಈ ಕಾರಣದಿಂದ ಪಾಕಿಸ್ತಾನವು ಭಿಕ್ಷುಕರನ್ನೆಲ್ಲ ಸೌದಿ ಅರೆಬಿಯಾ ಮತ್ತು ಇರಾಕ್ ನಂತಹ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತಿದೆ. ಇದೆಲ್ಲದರಿಂದ ಬಸವಳಿದಿರುವ ಸೌದಿ ಅರೆಬಿಯಾ ಅಯ್ಯೋ ನಿಲ್ಲಿಸ್ರಪ್ಪ ನಿಮ್ಮ ಸಹವಾಸ ಸಾಕು.. ಎಂದು ಕೈ ಮುಗಿಯುವ ಸ್ಥಿತಿಗೆ ಬಂದು ನಿಂತಿವೆ.
ದಾಖಲೆಯ ಹಣದುಬ್ಬರ ಮತ್ತು ಗಗನಕ್ಕೇರುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳಿಂದ ಬಡ ಪಾಕಿಸ್ತಾನಿಗಳು ಹೆಚ್ಚು ಬಳಲುತ್ತಿರುವುದನ್ನು ನೋಡಿದರೆ, ಪಾಕಿಸ್ತಾನದಿಂದ ಭಿಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಕುರಿತು ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿ ಇತ್ತೀಚೆಗೆ ತನ್ನ ಆತಂಕವನ್ನು ಹೊರ ಹಾಕಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಬಂಧಿತರಾಗಿರುವ ಶೇ.90ರಷ್ಟು ಭಿಕ್ಷುಕರು ಪಾಕಿಸ್ತಾನದವರಾಗಿದ್ದಾರೆ. ತೀರ್ಥಯಾತ್ರೆ ನೆಪದಲ್ಲಿ ಭಿಕ್ಷುಕರು ಪರ್ಮನೆಂಟ್ ಠಿಕಾಣಿ ಹೂಡುತ್ತಿದ್ದಾರೆ ಅನ್ನುವ ದೂರುಗಳು ಕೇಳಿ ಬರುತ್ತಿವೆ. ಈ ಭಿಕ್ಷುಕರು ಇರಾಕ್ ಮತ್ತು ಸೌದಿ ಅರೇಬಿಯಾದಲ್ಲಿ ಜೈಲುಗಳಲ್ಲಿದ್ದಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಹೇಳಿದ್ದಾರೆ.
ಪಾಕಿಸ್ತಾನಿ ಭಿಕ್ಷುಕರು ಉಮ್ರಾ ವೀಸಾದಲ್ಲಿ ಝಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ವಿದೇಶಕ್ಕೆ ಪ್ರಯಾಣಿಸುತ್ತಾರೆ. ಆದರೆ, ಆ ದೇಶಗಳಿಂದ ವಾಪಸ್ ಬರದೆ, ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಇರಾಕ್ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು ನಮಗೆ ತಿಳಿಸಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯೊಳಗೆ ಬಂಧಿಸಲಾದ ಹೆಚ್ಚಿನ ಜೇಬುಕಳ್ಳರು ಪಾಕಿಸ್ತಾನಿ ಪ್ರಜೆಗಳು ಎಂದು ಜೀಶಾನ್ ಖಂಜಾದಾ ತಿಳಿಸಿದ್ದಾರೆ. ಈ ಕುರಿತು ನ್ಯೂಸ್ ಇಂಟರ್ ನ್ಯಾಶನಲ್ ಕೂಡ ವರದಿ ಮಾಡಿದೆ.
ಸೆನೆಟರ್ ಮಂಜೂರ್ ಕಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜೀಶನ್ ಖಾಂಜದಾ ಅವರು ಸುಮಾರು 10 ಮಿಲಿಯನ್ ಪಾಕಿಸ್ತಾನಿ ನಾಗರಿಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಸ್ಥಾಯಿ ಸಮಿತಿಗೆ ತಿಳಿಸಿದರು. ವೀಸಾ ಪಡೆದುಕೊಂಡು ಹೋಗುವ ಈ ಜನರು ವಿದೇಶಗಳಲ್ಲಿ ಭಿಕ್ಷೆ ಬೇಡುತ್ತಾರೆ. ಪಾಕಿಸ್ತಾನದಿಂದ ಮಧ್ಯ ಪ್ರಾಚ್ಯಕ್ಕೆ ತೆರಳುವ ವಿಮಾನಗಳು ಸಾಮಾನ್ಯವಾಗಿ ಭಿಕ್ಷುಕರಿಂದಲೇ ಸಂಪೂರ್ಣವಾಗಿ ತುಂಬಿರುತ್ತವೆ ಎಂದು ಅವರು ಸಮಿತಿಗೆ ತಿಳಿಸಿದ್ದಾರೆ.