ನ್ಯೂಸ್ ನಾಟೌಟ್ : ಕರಿಕೆ ಪ್ರೌಢಶಾಲೆಯಲ್ಲಿ ಕಳೆದ 7 ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಶಿಕ್ಷಕರ ಕೊರತೆ ಎದ್ದಿದೆ.ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶಾಸಕ ಎ.ಎಸ್.ಪೊನ್ನಣ್ಣರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ನಮ್ಮ ಗ್ರಾಮದ ಈ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಸಾವಿರಾರು ಮಂದಿ ವಿದ್ಯಾವಂತರಾಗಿದ್ದಾರೆ.ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶ ವಿದೇಶಗಳಲ್ಲಿಯೂ ವೃತ್ತಿಜೀವನ ನಡೆಸುತ್ತಿದ್ದಾರೆ. ಈ ಶಾಲೆಯು ಪ್ರತಿವರ್ಷವೂ ಒಳ್ಳೆಯ ಫಲಿತಾಂಶವನ್ನು ನೀಡುತ್ತಿದೆ. 2022-2೪ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 100 ಫಲಿತಾಂಶ ಪಡೆದಿತ್ತು. ಅದಕ್ಕಾಗಿ ಶ್ರಮಿಸಿದ ಎಲ್ಲಾ ಗುರು ವೃಂದದವರಿಗೂ ಮತ್ತು ನಮ್ಮ ಹಿರಿಯ ವಿದ್ಯಾರ್ಥಿಗಳಿಗೂ ನಮನಗಳು.
ಸರ್, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಯಲ್ಲಿ 20 ಮಂದಿ, 9ನೇ ತರಗತಿಯಲಿ 22 ಮಂದಿ ಮತ್ತು 10ನೇ ತರಗತಿಯಲ್ಲಿ 28 ಮಂದಿ ಸೇರಿದಂತೆ ಒಟ್ಟು 70 ಮಂದಿ ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ.ನಮ್ಮ ಶಾಲೆಯಲ್ಲಿ ಈಗ ಸಂಪೂರ್ಣವಾಗಿ ಶಿಕ್ಷಕರು,ಸಿಬ್ಬಂದಿಗಳ ಕೊರತೆ ಇದೆ.ಶಿಕ್ಷಕರ ಹುದ್ದೆ ಒಟ್ಟು -8 ಮತ್ತು ಶಿಕ್ಷಕೇತರ-3 ಹುದ್ದೆಗಳು ಇರುತ್ತದೆ. ಇದರಲ್ಲಿ, ಸಮವಿಜ್ಞಾನ-1, ವಿಜ್ಞಾನ-1 ಮತ್ತು ಇಂಗ್ಲೀಷ್-1 ಒಟ್ಟು ಮೂರು ಮಂದಿ ಶಿಕ್ಷಕರು ಶಾಲೆಗೆ ಬರುತ್ತಿದ್ದು, ಅವರೆಲ್ಲರೂ ಕೂಡ ವರ್ಗಾವಣೆಯನ್ನು ಪಡೆದುಕೊಂಡಿದ್ದು,ಇಲ್ಲಿಂದ ಅವರು ತಕ್ಷಣವೇ ವರ್ಗಾವಣೆಯಾಗುವ ನಿರೀಕ್ಷೆಯಲ್ಲಿದ್ದಾರೆ.ಉಳಿದಂತೆ ಕನ್ನಡ-1 ಮತ್ತು ಹಿಂದಿ-1 ಗುತ್ತಿಗೆ ಆಧಾರದಲ್ಲಿ ಸ್ಥಳೀಯ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ.
ಶಿಕ್ಷಕರ ಹುದ್ದೆಯಲ್ಲಿ ಗಣಿತ ವಿಷಯದ ಒಬ್ಬರು ಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲಿ ನೇಮಕವಾಗಿದ್ದು ಇದುವರೆಗೆ ಶಾಲೆಗೆ ಬಂದು ಹಾಜರಾಗಿರುವುದಿಲ್ಲ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಸ.ಹಿ.ಪ್ರಾ.ಶಾಲೆ ಏಣಗಿ ಇಲ್ಲಿಂದ ನಮ್ಮ ಶಾಲೆಗೆ ವರ್ಗಾವಣೆಗೊಂಡಿದ್ದು ಅವರ ಹೆಸರು ರಾಜಶೇಖರ್.ಜೆ. ಶಿಕ್ಷಕೇತರ ಹುದ್ದೆಯಲ್ಲಿ, ಒಬ್ಬರು ಗುಮಾಸ್ತರು ನೇಮಕವಾಗಿದ್ದು, ಅವರ ಹೆಸರು ಆಶ್ರಿತ ಡಿ.ಸಿಲ್ವಾ.ಆದರೆ ಅವರು 5-6-2021ರಲ್ಲಿ… ನೇಮಕವಾಗಿದ್ದು. 15/02/2022ರಲ್ಲಿ ನಿಯೋಜನೆ ಮೇರೆಗೆ ವರ್ಗಾವಣೆ ಪಡೆದು ಜಿಲ್ಲಾ ಪಂಚಾಯಿತಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಕ್ಷಣವೇ ಮೂಲ ಹುದ್ದೆಗೆ ಹಿಂಪಡೆಯಬಹುದಾಗಿದೆ ಅವರ ಕೊರತೆಯಿಂದ ಎಲ್ಲಾ ಕಛೇರಿ ಕೆಲಸಗಳನ್ನು ಶಿಕ್ಷಕರೇ ನಿರ್ವಹಿಸಬೇಕಾಗಿದ್ದು ಅದರಿಂದ ನಮ್ಮ ಕಲಿಕೆಗೆ ತೊಂದರೆ ಆಗುತ್ತದೆ.
ಈ ಬಗ್ಗೆ, ತಾವು ಜುಲೈ ತಿಂಗಳ 2ನೇ ತಾರೀಖಿನಂದು ಅಭಿನಂದನಾ ಸಭೆಗೆ ಕರಿಕೆಗೆ ಬಂದಿದ್ದಾಗ ಶಿಕ್ಷಕರ ಕೊರತೆ ನೀಗಿಸಿ ಕೊಡಬೇಕಾಗಿ ತಮ್ಮಲ್ಲಿ ಮನವಿ ಸಲ್ಲಿಸಲಾಗಿದೆ. ಇಲ್ಲಿಗೆ ಮೂರು ತಿಂಗಳುಗಳು ಕಳೆದಿದೆ. ಇದುವರೆಗೆ ಶಿಕ್ಷಕರ ಕೊರತೆ ನೀಗಿರುವುದಿಲ್ಲ. ಆದ್ದರಿಂದ ತಾವು ಅತೀ ತುರ್ತು ಅಗತ್ಯವೆಂದು ಪರಿಗಣಿಸಿ ನಮಗೆ ಶಿಕ್ಷಕರನ್ನು ತಕ್ಷಣವೇ ನೇಮಿಸಿ ಕೊಡಬೇಕೆಂದು ಪ್ರಾರ್ಥಿಸುತ್ತೇವೆ. ಬಾಲ್ಯದಲ್ಲಿ ಸಿಗಬೇಕಾದ ಪ್ರೀತಿ ವಿದ್ಯಾರ್ಥಿ ದಿಸೆಯಲ್ಲಿ, ಸಿಗಬೇಕಾದ ಶಿಕ್ಷಣ ಇವೆರಡು ಆಯಾ ಸಮಯದಲ್ಲಿ ದೊರಕದಿದ್ದರೆ ನಾವು ನಮ್ಮ ಬದುಕಿನಲ್ಲಿ ದೊಡ್ಡ ಕೊರತೆಯನ್ನು ಹೊಂದಬಹುದೆಂದು ಭಯವಿದೆ ಸರ್..
ಶಿಕ್ಷಣದ ಬಗ್ಗೆ ಅತೀವ ಪ್ರೀತಿ ಇರುವ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ದೊಡ್ಡ ಮೊತ್ತದ ಸಹಾಯವನ್ನು ಮಾಡುತ್ತಿರುವ ತಾವು ವಿದ್ಯಾರ್ಥಿ ಬದುಕಿಗೆ ಆಸರೆಯಾಗುವ ತೀರ್ಮಾನವನ್ನು ತಕ್ಷಣವೇ ಕೈಗೊಳ್ಳ ಬೇಕಾಗಿ ಬೇಡಿಕೊಳ್ಳುತ್ತೇವೆ.ಈ ಬಗ್ಗೆ ತಮ್ಮ ಸಕಾರಾತ್ಮಕ ನಿರ್ದೇಶನಗಳಿಗಾಗಿ ಈ ಕ್ಷಣದಿಂದಲೇ ಕಾಯುತ್ತೇವೆ. ಇಲ್ಲವಾದಲ್ಲಿ, ತಮ್ಮನ್ನು ತಮ್ಮ ನಿವಾಸಕ್ಕೆ ಬಂದು ಭೇಟಿ ಮಾಡಲು ಬಯಸುತ್ತೇವೆ ಎಂದು ವಿಧ್ಯಾರ್ಥಿಗಳು ಮತ್ತು ಪೋಷಕರು ಮನವಿ ಮಾಡಿದ್ದಾರೆ.