ಮುಂಬೈ: ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶನಿವಾರ ನ್ಯೂಜಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದರು.
ನಗರದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಅಪರೂಪದ ಸಾಧನೆ ಮಾಡಿದರು. ಈ ಮೂಲಕ ಎಜಾಜ್ ಪಟೇಲ್ ಭಾರತದ ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ನ ಇನ್ನಿಂಗ್ಸ್ವೊಂದರಲ್ಲಿ 10 ವಿಕೆಟ್ ಪಡೆದು ಸಾಧನೆ ಮಾಡಿದವರಲ್ಲಿ ಎಜಾಜ್ ಪಟೇಲ್ ಮೂರನೇ ಆಟಗಾರರೆಸಿದ್ದಾರೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ (1999) ಅವಿಸ್ಮರಣೀಯ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ನ ಜಿಮ್ ಲೇಕರ್ (1956) ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಗೆ ಭಾಜನರಾಗಿದ್ದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 109.5 ಓವರ್ ಗಳಲ್ಲಿ 325 ರನ್ ಗಳಿಸಿ ಆಲೌಟ್ ಆಗಿದೆ. ಮಾಯಂಕ್ ಅಗರವಾಲ್ 150, ಅಕ್ಷರ್ ಪಟೇಲ್ 52 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು.