ನ್ಯೂಸ್ ನಾಟೌಟ್ :ದಂಪತಿ ಜಗಳದಿಂದಾಗಿ ಏನೂ ಅರಿಯದ ಒಂದೂವರೆ ವರ್ಷದ ಮಗು ಯಾತನೆ ಅನುಭವಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಪೊಲೀಸರ ಮುಂದೆಯೇ ಮಗಳನ್ನು ಮುಗಿಸಲು ತಂದೆ ಯತ್ನಸಿರುವ ಭಯಾನಕ ಘಟನೆ ಭಾನುವಾರ(ಸೆ.24) ಬೆಳಗ್ಗೆ 2.10 ರ ಸುಮಾರಿಗೆ ನಡೆದಿದೆ.
ಹೌದು, ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ.ಈ ವೇಳೆ ಅದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಆತನ ಪತ್ನಿ, ಮಂಗಳೂರು ಪೂರ್ವ ಪೊಲೀಸ್ ಠಾಣೆ(Mangalore East Police Station)ಗೆ ಹೋಗಿ ‘ನನ್ನ ಪತಿ ಜಗಳ ಮಾಡುತ್ತಿದ್ದಾನೆ. ನನ್ನ ಹಾಗೂ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ವೇಳೆ ಮಹಿಳೆಯು ಮನೆಯಿಂದ ಗಾಬರಿಯಲ್ಲಿ ಓಡೋಡಿ ಬಂದಿರುವುದರಿಂದ ತನ್ನ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಾರೆ. ಕೂಡಲೇ ಪೊಲೀಸರು 112 ಗೆ ಕರೆ ಮಾಡಿ ತಮ್ಮ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಹೋಗಿ, ಆಕೆಯ ಪತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಕೂಡಲೇ ಮಹಿಳೆ ಮನೆಗೆ ತೆರಳಿದ ಪೊಲೀಸರು ಆತನ ಜತೆ ಮಕ್ಕಳನ್ನು ಕರೆತಂದಿದ್ದಾರೆ ಎನ್ನಲಾಗಿದೆ.ಈ ವೇಳೆ ಪೊಲೀಸರು ವಿಚಾರಿಸುತ್ತಿರುವಾಗಲೇ ಪತ್ನಿ ಮೇಲೆ ಕುಪಿತಗೊಂಡ ಪತಿ ನನ್ನ ಮೇಲೆಯೇ ದೂರು ನೀಡುತ್ತಿಯಾ ಎಂದು ಪತ್ನಿಯ ಮೇಲೆ ಹ*ಲ್ಲೆಗೆ ಮುಂದಾಗುತ್ತಾನೆ ಎಂದು ತಿಳಿದು ಬಂದಿದೆ.ಮಾತ್ರವಲ್ಲ ಪೊಲೀಸ್ ಮುಂದೆಯೇ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಗಲಾಟೆ ಸಂದರ್ಭದಲ್ಲಿ ಒಂದೂವರೆ ವರ್ಷದ ಹೆಣ್ಣು ಕೂಸುವನ್ನು ನೆಲಕ್ಕೆ ಎಸೆದಿದ್ದು,ಮಗುವಿಗೆ ಕುತ್ತಿಗೆ ಮತ್ತು ತಲೆಗೆ ಗಾಯಗಳಾಗಿತ್ತು ಎಂದು ತಿಳಿದು ಬಂದಿದೆ. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ಪಿಎಸ್ಐ ಪ್ರತಿಭಾ ಅವರನ್ನು ಠಾಣೆಗೆ ಕರೆಸಿ, ಅವರ ಜೊತೆ ತಾಯಿ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಈತನ ಈ ವರ್ತನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪತಿ ಮಹೇಶ್ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.