ನ್ಯೂಸ್ ನಾಟೌಟ್ : ಸಾಲ ಪಡೆದು 1,500 ರು.ಗೆ ಹೆಚ್ಚುವರಿ ಬಡ್ಡಿ ಕಟ್ಟಲಿಲ್ಲ ಎಂದು ದಲಿತ ಮಹಿಳೆಯನ್ನು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಬಿಹಾರದ ಪಟನಾ (Patna) ಜಿಲ್ಲೆಯ ಮೋಸಿಂಪುರ (Mosimpur) ಗ್ರಾಮದಿಂದ ವರದಿಯಾಗಿದೆ. ಆಕೆಯನ್ನು ಬೆತ್ತಲೆಗೊಳಿಸಿ, ದೊಣ್ಣೆಯಿಂದ ಥಳಿಸಿ ಆಕೆಯ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಕ್ರೂರವಾಗಿ ನಡೆದುಕೊಂಡು ಘಟನೆ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಸಂತ್ರಸ್ತೆಯ ಪತಿ ಪ್ರಮೋದ್ ಸಿಂಗ್ (Pramod singh) ಎಂಬುವವರಿಂದ 1,500 ರು. ಸಾಲ ಪಡೆದಿದ್ದರು ಎನ್ನಲಾಗಿದೆ.ಈ ವೇಳೆ ಹಣ ಮರುಪಾವತಿ ಮಾಡಿದ್ದರೂ ಹೆಚ್ಚುವರಿ ಬಡ್ಡಿ ನೀಡುವಂತೆ ಪ್ರಮೋದ್ ಆಗ್ರಹಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ದಂಪತಿ ಒಪ್ಪದಿದ್ದ ಕಾರಣಕ್ಕೆ ಪ್ರಮೋದ್ನ ಮಗ ಅಂಶು ಹಾಗೂ ಅವರ ನಾಲ್ವರು ಸಹಾಯಕರು ಮಹಿಳೆ ಮೇಲೆ ಥಳಿಸಿ ಈ ಕೃತ್ಯವೆಸಗಿದ್ದಾರೆ.
ಶನಿವಾರ ರಾತ್ರಿ ವೇಳೆ ಮಹಿಳೆ ನೀರು ತರಲು ಮನೆಯಿಂದ ಹೊರಗಡೆ ಹೋಗಿದ್ದಾರೆ. ಈ ವೇಳೆ ಐವರು ಬಂದು ಆಕೆಯನ್ನು ತಮ್ಮೊಂದಿಗೆ ಬರುವಂತೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಒಪ್ಪದ ಆಕೆಯನ್ನು ಒತ್ತಾಯವಾಗಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ದೊಣ್ಣೆಗಳಿಂದ ಥಳಿಸಿದ್ದಾರೆ ಎನ್ನಲಾಗಿದೆ.
ಇಷ್ಟು ಮಾತ್ರವಲ್ಲದೇ ಆಕೆಯ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ವೇಳೆ ಅಂಶು, ಮಹಿಳೆಯ ಬಾಯಿಯಲ್ಲಿ ಬಲವಂತವಾಗಿ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯವನ್ನೆಸಗಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಆಕೆ ಬೆತ್ತಲೆಯಾಗಿಯೇ ಹೇಗೋ ಅವರಿಂದ ತಪ್ಪಿಸಿಕೊಂಡು ಮನೆಯತ್ತ ಓಡಿಬಂದಿದ್ದಾಳೆ.
ಇದೇ ವೇಳೆ ಆಕೆಯನ್ನೇ ಹುಡುಕಾಡುತ್ತಿದ್ದ ಕುಟುಂಬಸ್ಥರಿಗೆ ಸಿಕ್ಕಿದಾಗ ಘಟನೆಯ ವಿಷಯ ತಿಳಿದು ಬಂದಿದೆ.ಮಹಿಳೆಯ ತಲೆಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು ಪೊಲೀಸರು ಐವರಿಗೆ ಶೋಧ ನಡೆಸಿದ್ದಾರೆ.