ನ್ಯೂಸ್ ನಾಟೌಟ್ :ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗನೋರ್ವ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅಪಘಾತವನ್ನು ತಪ್ಪಿಸಿರುವ ಘಟನೆ ವರದಿಯಾಗಿದೆ.ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು,ಮುರ್ಸಲೀನ್ ಶೇಖ್ ಎಂಬ 12 ವರ್ಷದ ಬಾಲಕ ರೈಲು ಅಪಘಾತವನ್ನು ತಪ್ಪಿಸಿರುವ ಬಾಲಕ.
ಬಾಲಕ ಅಂದು ತಂದೆಯೊಂದಿಗೆ ಹೊಲಕ್ಕೆ ಬಂದಿದ್ದು, ಮುರ್ಸಲಿನ್ ರೈಲ್ವೆ ಹಳಿಯ ಒಂದು ಭಾಗವು ಹಾನಿಗೊಳಗಾಗಿರುವುದನ್ನು ಗಮನಿಸಿದ್ದಾನೆ. ಇನ್ನೇನು ರೈಲು ಬಂದೇ ಬಿಡುತ್ತದೆ ಏನು ಮಾಡುವುದು ಎಂದು ಆಲೋಚಿಸಿ ತಕ್ಷಣ ತಾನು ಧರಿಸಿರುವ ಕೆಂಪು ಟಿ ಶರ್ಟ್ ತೆಗೆದು ರೈಲು ಬರುತ್ತಿದ್ದ ಕಡೆಗೆ ಬೀಸುತ್ತಾನೆ.ತಕ್ಷಣವೇ ಇದನ್ನು ಗಮನಿಸಿದ ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕುತ್ತಾರೆ. ನಿಲ್ಲಿಸಿ ಪರಿಶೀಲಿಸಿದ ಅವರು ಬಾಲಕನ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ.
ಕಳೆದ ಒಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿರೋ ಹಿನ್ನಲೆ ರೈಲು ಹಳಿ ಹಾಳಾಗಿತ್ತು.ಹೀಗಾಗಿ ಬಾಲಕ ಸರಿಯಾದ ಸಂದರ್ಭದಲ್ಲಿ ವೀಕ್ಷಣೆ ಮಾಡಿ ಅಪಘಾತವನ್ನು ತಪ್ಪಿಸಿದ್ದಾನೆ. ಜತೆಗೆ ಜನರ ಜೀವವೂ ಉಳಿದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ತಡವಾಗಿದ್ದರೂ ದೊಡ್ಡ ಅಪಘಾತ ನಡೆದುಹೋಗುತ್ತಿತ್ತು ಎಂದಿದ್ದಾರೆ.
ರೈಲ್ವೆ ಅಧಿಕಾರಿಗಳು ಬಾಲಕನಿಗೆ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು ಮತ್ತು ನಗದು ಬಹುಮಾನವನ್ನು ಸಹ ನೀಡಿದರು. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಇದರ ಮಧ್ಯೆ ಹಳಿಗಳ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.