ನ್ಯೂಸ್ ನಾಟೌಟ್ : ಭಾರತೀಯ ಸೇನೆಯ ಯೋಧನ ಮೇಲೆ ಹಿಗ್ಗಾ ಮುಗ್ಗ ಥಳಿಸಿದ್ದಲ್ಲದೇ ಆತನ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಕೇರಳದ ಕೊಲ್ಲಂ ಎಂಬಲ್ಲಿ ಸೋಮವಾರ(ಸೆ.26)ದಂದು ಈ ಪ್ರಕರಣ ನಡೆದಿದೆ ಎಂದು ವರದಿಯಾಗಿದೆ.
ಸೈನಿಕನ ಹೆಸರು ಹಲ್ವೀಲ್ ಶೈನ್. ದುಷ್ಕರ್ಮಿಗಳು ಏಕಾಏಕಿ ಬಂದು ಈ ಯೋಧನನ್ನು ಮನೆಯಿಂದ ಹೊರಗೆಳೆದಿದ್ದಾರೆ ಎನ್ನಲಾಗಿದೆ.ಕೈಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಥಳಿಸಿ ತುಳಿದು ವಿಕೃತಿ ಮೆರೆದಿದ್ದಾರೆ ಎಂದು ತಿಳಿದು ಬಂದಿದೆ.ಇದಾದ ಬಳಿಕ ಯೋಧನ ಬೆನ್ನಿನ ಮೇಲೆ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಎಂಬುದಾಗಿ ಬರೆದಿದ್ದರು ಎನ್ನುವ ಫೋಟೋ ಲಭ್ಯವಾಗಿವೆ.
ಯೋಧ ರಾಜಸ್ಥಾನದಲ್ಲಿರುವ ಸೇನೆಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಕಲ್ ಕೇಡರ್ನಲ್ಲಿ ಕರ್ತವ್ಯದಲ್ಲಿದ್ದವರು ಎಂದು ತಿಳಿದುಬಂದಿದೆ.ದುಷ್ಕರ್ಮಿಗಳ ತಂಡದಲ್ಲಿ ಆರು ಮಂದಿ ಇದ್ದು,ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಿಎಫ್ಐ ನಿಷೇಧಿತ ಸಂಘಟನೆಯಾಗಿದ್ದು, ಈ ಘಟನೆಗೆ ಕಾರಣ ಏನು ಎನ್ನುವುದು ಇನ್ನು ತಿಳಿದು ಬಂದಿಲ್ಲ.