ನ್ಯೂಸ್ ನಾಟೌಟ್ : ಮಕ್ಕಳಿಗೆ ಒಂಚೂರು ನೋವಾದರೂ ತಂದೆ-ತಾಯಿಯಾದವರು ಸಹಿಸಿಕೊಳ್ಳೋದಿಲ್ಲ.ಅಂಥದ್ರಲ್ಲಿ ಈ ಶಿಕ್ಷಕ ಮಾಡಿದ ಪಾಪದ ಕೃತ್ಯ ನೋಡಿದ್ರೆ ಮೈ ಉರಿಯೋದಂತು ಗ್ಯಾರಂಟಿ.ಸದ್ಯ ಈ ಸಂಬಂಧ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಪಂಜಾಬ್ನ ಲುಧಿಯಾನದಲ್ಲಿ ಈ ಘಟನೆ ಸಂಭವಿಸಿದೆ. ಶಾಲಾ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ ಕ್ರೂರವಾಗಿ ಥಳಿಸಿದ್ದು, ನಡೆಯಲಾಗದ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಅದರ ವಿಡಿಯೊ ವೈರಲ್ (Viral New) ಆದ ಬಳಿಕ ಎಫ್ಐಆರ್ ಕೂಡ ದಾಖಲಾಗಿದೆ.
ವಿಡಿಯೋವನ್ನು ಗಮನಿಸಿದ್ರೆ ಶಿಕ್ಷಕ ಬೇರೆಯವರ ನೆರವಿನ ಮೂಲಕ ವಿದ್ಯಾರ್ಥಿಯ ಕೈ ಮತ್ತು ಕಾಲುಗಳನ್ನು ಹಿಡಿಸಿಕೊಂಡು ಕಾಲು ಮುರಿಯುವ ಹಾಗೆ ಹೊಡೆದಿದ್ದಾನೆ.ಈ ಬಗ್ಗೆ ದೂರು ದಾಖಲಾಗಿದೆ. ಬಾಲವಿಕಾಸ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಮಾನವೀಯ ಕೃತ್ಯವೆಂದೇ ಹೇಳಬಹುದು.ಶಿಕ್ಷಕ ಹುಡುಗನನ್ನ ಇಬ್ಬರಿಂದ ಎತ್ತಿ ನೇತಾಡಿಸಿ ಬಳಿಕ ಕಾಲಿನ ಮೇಲೆ ಬಾರಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಶಿಕ್ಷಕನ ಹೊಡೆತಕ್ಕೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ವರದಿಗಳ ಪ್ರಕಾರ,ಸಣ್ಣ ವಿಷಯಕ್ಕಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.ಆರೋಪಿ ಶಿಕ್ಷಕನು ಮಗುವಿಗೆ ನಿರಂತರ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದು, ಮನಸೋ ಇಚ್ಛೆ ಥಳಿಸಿದ್ದಾನೆ.ಲುಧಿಯಾನ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಶಿಕ್ಷಕನನ್ನು ಶೇರ್ಪುರ್ ಕಲಾನ್ ನಿವಾಸಿ ಶ್ರೀ ಭಗವಾನ್ ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದೆ.
ಶಾಲೆಯಿಂದ ಮರಳಿದ್ದ ಹುಡುಗನಿಗೆ ನಡೆಯಲು ಕಷ್ಟವಾಗುತ್ತಿರುವುದನ್ನು ಮತ್ತು ನೋವಿನಿಂದ ಬಳಲುತ್ತಿರುವುದನ್ನು ಗಮನಿಸಿದ ನಂತರ ತಾಯಿ ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ವೇಳೆ ಶಿಕ್ಷಕನ ದುಷ್ಕೃತ್ಯ ತಿಳಿದುಬಂದಿದ್ದು, ವಿಷಯ ತಿಳಿದ ತಾಯಿ ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಗು ಇನ್ನೊಬ್ಬ ವಿದ್ಯಾರ್ಥಿಗೆ ಪೆನ್ಸಿಲ್ ನಿಂದ ಹೊಡೆದಿದೆ ಎನ್ನುವ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಶಿಕ್ಷಕರಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಶಿಕ್ಷೆಯಾಗಿ ಮಗುವಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದರು ಎಂದು ಹೇಳಲಾಗಿದೆ.ವೀಡಿಯೊದಲ್ಲಿ,ಇಬ್ಬರು ವಿದ್ಯಾರ್ಥಿಗಳು ಬಾಲಕನ ಕೈ ಮತ್ತು ಕಾಲುಗಳಿಂದ ಎತ್ತಿ ಹಿಡಿದಿದ್ದರೆ, ಶಿಕ್ಷಕರು ಆತನ ಬೆನ್ನು, ಕಾಲುಗಳು ಮತ್ತು ಪಾದದ ಕಾಲುಗಳಿಗೆ ಕೋಲಿನಿಂದ ಹೊಡೆಯುವುದನ್ನು ಕಾಣಬಹುದು.
ಈ ಘಟನೆಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳಾಗಿವೆ.ಸೋಶಿಯಲ್ ಮೀಡಿಯಾದಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಇದು ಬೇರೆಯದ್ದೇ ರೂಪವನ್ನು ಪಡೆದುಕೊಂಡಿದೆ.ನೆಟ್ಟಿಗರು ಈ ವಿಡಿಯೋ ವೀಕ್ಷಿಸಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ನಿರ್ಮಲ್ಜಿತ್ ಕೌರ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ದೂರಾಗಿ ದಾಖಲಿಸಿಕೊಂಡಿದ್ದಾರೆ. ತಿಂಗಳೊಳಗೆ ಲುಧಿಯಾನದ ಪೊಲೀಸ್ ಆಯುಕ್ತರಿಂದ ವರದಿಯನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಮಗುವಿನ ತೊಡೆಗಳು ಮತ್ತು ಬೆನ್ನಿನ ಮೇಲೆ ಗುರುತುಗಳಿವೆ ಮತ್ತು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮಗುವಿನ ತಾಯಿ ಹೇಳಿಕೊಂಡಿದ್ದಾರೆ. ಆಯೋಗವು ಕೂಡ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ ಮತ್ತು ಮುಂದಿನ ವಿಚಾರಣೆಯ ದಿನಾಂಕದ ವೇಳೆಗೆ ಲುಧಿಯಾನದ ಪೊಲೀಸ್ ಆಯುಕ್ತರಿಂದ ವರದಿಯನ್ನು ಕೇಳಿದೆ ಎಂದು ತಿಳಿದು ಬಂದಿದೆ.ಮಕ್ಕಳು ಮಾಡುವ ತಪ್ಪಿಗೆ ಕ್ಷಮೆ ಇದೆ.
ತಪ್ಪುಗಳನ್ನು ಮಾಡದೇ ಯಾವ ಮಕ್ಕಳು ಬೆಳೆಯೋದಿಲ್ಲ.ಸರಿಯಾದ ರೀತಿಯಲ್ಲಿ ಅವರಿಗೆ ಬುದ್ದಿ ಹೇಳಿ ಬೆಳೆಸೋದು ಪೋಷಕರ ಕರ್ತವ್ಯವಾದ್ರೆ ಮಕ್ಕಳು ಶಾಲೆಗೆ ಹೋದ ಬಳಿಕ ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ.ಹಾಗಂತ ಹೇಳಿ ಈ ಘಟನೆಯಲ್ಲಿ ನಡೆದ ಹಾಗೆ ಮನಸೋ ಇಚ್ಛೆ ಥಳಿಸೋದು ಅಂದ್ರೆ ಒಂದು ಜೀವಕ್ಕೆ ಬೆಲೆಯೇ ಇಲ್ವ ಅನ್ನುವಂತಹ ಪ್ರಶ್ನೆಗಳು ಮೂಡುತ್ತವೆ.ಮಕ್ಕಳು ಏನೇ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ರೂ ಹೆತ್ತ ಪೋಷಕರಿಗೆ ಅವರೇ ಉಸಿರಾಗಿರುತ್ತಾರೆ.ಅವರಿಗೆ ಬುದ್ದಿವಾದ ಹೇಳಿ ಸರಿದಾರಿಗೆ ತರಬೇಕು ವಿನಃ ಈ ರೀತಿಯ ಕೃತ್ಯದಿಂದ ಮಕ್ಕಳು ಶಿಕ್ಷಕರಿಂದ ಏನು ಕಲಿಯಲು ಸಾಧ್ಯವಿಲ್ಲ.