ನ್ಯೂಸ್ ನಾಟೌಟ್: ಉದ್ಯೋಗವಿಲ್ಲದೆ ಅಲೆಯುತ್ತಿರುವ ಜನರಿಗೆ ಸಹಕಾರಿಯಾಗಲಿ ಎಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಸ್ಥಿತಿ ಪ್ಯಾಥೆಟಿಕ್ ಆಗಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹುಲ್ಲು-ಗಿಡಗಳು ಬೆಳೆದು ತುಕ್ಕು ಹಿಡಿಯುವ ಹಂತದಲ್ಲಿರುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಸ್ಥಿತಿ ಈಗ ಶೋಚನೀಯವಾಗಿದೆ. ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಕಾರ್ಯಕ್ರಮದಡಿ ಉದ್ಘಾಟನೆಗೊಂಡಿದ್ದ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳು ಈಗ ಮಳೆ, ಬಿಸಿಲಿನ ಝಳಕ್ಕೆ ಸಿಲುಕಿಕೊಂಡು ಹಾಳಾಗುತ್ತಿರುವುದು ವಿಪರ್ಯಾಸವೇ ಸರಿ.
ಸುಳ್ಯ ತಾಲೂಕು ಕಚೇರಿಯಲ್ಲಿ ಯೋಜನೆ ಉದ್ಘಾಟನೆಗಾಗಿ 12 ವಾಹನಗಳನ್ನು ತರಲಾಗಿತ್ತು. ಈ ವಾಹನಗಳು ಅಂದಿನ ಶಾಸಕ ಕಮ್ ಸಚಿವ ಎಸ್ ಅಂಗಾರ ಉದ್ಘಾಟನೆಗೊಳಿಸಿದ ಹೋದ ಬಳಿಕ ಅಲ್ಲಿಯೇ ಅನಾಥವಾಗಿ ಬಿದ್ದಿತ್ತು. ಲಕ್ಷಾಂತರ ರೂ. ಹಣ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಅಸಮಾಧಾನ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಎಂಟು ವಾಹನಗಳನ್ನು ಕೆಎಫ್ ಡಿಸಿಯವರು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಶೆಡ್ ಗೆ ತೆಗೆದುಕೊಂಡು ಹೋಗಿದ್ದರು.
ಇದಾದ ಬಳಿಕ ನಾಲ್ಕು ವಾಹನಗಳು ಅಲ್ಲಿಯೇ ನಿಂತಿದ್ದವು. ಆ ನಾಲ್ಕು ವಾಹನಗಳು ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಈ ವಾಹನಗಳನ್ನು ಸುರಕ್ಷಿತಸ್ಥಳಕ್ಕೆ ಕೊಂಡು ಹೋಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಕೆಎಫ್ ಡಿಸಿ ಸಂಸ್ಥೆ ಮೂಲಗಳು ಹೇಳುವ ಪ್ರಕಾರ ಈ ವಾಹನವನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡು ಬಂದಿರುವವರು ವಾಹನಗಳನ್ನು ಕರ್ನಾಟಕ ಮೀನುಗಾರಿಕಾ ನಿಗಮಕ್ಕೆ ಹಸ್ತಾಂತರ ಮಾಡಿಲ್ಲ ಎಂದು ಹೇಳಿದೆ. ಇನ್ನೊಂದು ಮೂಲಗಳ ಪ್ರಕಾರ ಪೂರ್ತಿ ಬಿಲ್ ಪಾವತಿ ಆಗಿಲ್ಲ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ತುಕ್ಕು ಹಿಡಿದಿರುವ ನಿರ್ಧಾರದಿಂದ ಭಾರಿ ಸಮಸ್ಯೆಯಾಗಿರುವುದಂತೂ ನಿಜ.