ನ್ಯೂಸ್ ನಾಟೌಟ್ : ಸುತ್ತಲೂ ಸಂಭ್ರಮದ ವಾತಾವರಣ,ನೆರೆದವರ ಮುಖದಲ್ಲಿ ಮಂದಹಾಸ, ಹಸಿರು ತೋರಣಗಳಿಂದ ಶೃಂಗಾರಗೊಂಡ ವೇದಿಕೆ,ಕಲರ್ ಕಲರ್ ವಸ್ತ್ರಗಳಲ್ಲಿ ಮಿಂಚಿದ ಪೌರಕಾರ್ಮಿಕರು…ಇದು ಯಾವುದೋ ಊರಲ್ಲಾದ ಕಾರ್ಯಕ್ರಮವಲ್ಲ,ಬದಲಾಗಿ ಸುಳ್ಯ ನಗರ ಪಂಚಾಯತ್ ಆವರಣದಲ್ಲಿರುವ ಕಸದ ಶೆಡ್ನಲ್ಲಿ ಕಂಡು ಬಂದ ಕಣ್ಮನ ಸೆಳೆಯುವ ದೃಶ್ಯ..!
ಹೌದು,ಅದೊಂದು ಕಾಲದಲ್ಲಿ ಸುಳ್ಯ ನಗರಪಂಚಾಯತ್ಗೆ ಕಸವೇ ಒಂದು ಸವಾಲಾಗಿ ಪರಿಣಮಿಸಿತ್ತು.ಪಂಚಾಯತ್ ಮುಂಭಾಗ ಕಸದ ಶೆಡ್ನಲ್ಲಿ ಕಸ ತುಂಬಿ ತುಳುಕಿತ್ತು.ಈ ಸುದ್ದಿ ರಾಜ್ಯ ಮಟ್ಟದಲ್ಲಿಯೂ ಭಾರಿ ಚರ್ಚೆಯಾಗಿತ್ತು.ಆದರೀಗ ಕಸ ತುಂಬಿದ್ದ ಶೆಡ್ ಶೃಂಗಾರಗೊಂಡು ನಳನಳಿಸುತ್ತಿದೆ.ಪೌರಕಾರ್ಮಿಕರ ದಿನಾಚರಣೆ ಹಿನ್ನಲೆಯಲ್ಲಿ ಕಸದ ಶೆಡ್ಡನ್ನೇ ಸಭಾ ವೇದಿಕೆಯಾಗಿ ರೂಪಾಂತರ ಮಾಡಲಾಗಿದೆ. ನೆಲಕ್ಕೆ ಸಗಣಿ ಸಾರಿಸಿ ಒಂದೊಳ್ಳೆ ವಾತಾವರಣವನ್ನೇ ನಿರ್ಮಿಸಲಾಗಿದೆ.ಇದನ್ನು ವೀಕ್ಷಿಸಿದ ಜನ ವಾವ್ ಎಂದು ಉಚ್ಚರಿಸಿದರು.
ನಗರದ ಸ್ವಚ್ಚತೆಗೆ ದಿನವಿಡೀ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಕೆಲಸದಲ್ಲಿ ವಿಭಿನ್ನತೆಯಿಲ್ಲ.ಬೆಳಗ್ಗೆ ಬೇಗ ಬಂದು ನಗರವನ್ನು ಸ್ವಚ್ಚಗೊಳಿಸಬೇಕು,ಕಸ ವಿಂಗಡಣೆ,ವಿಲೇವಾರಿ ಅಂತೆಲ್ಲಾ ನೂರಾರು ಕೆಲಸದಲ್ಲೇ ಮಗ್ನರಾಗಿರುತ್ತಾರೆ.ಆದರೆ ಇಂದು ಕೊಂಚ ಡಿಫರೆಂಟ್ ಎಂಬಂತೆ ಎಲ್ಲರೂ ಒಟ್ಟಾಗಿ ಸಂಭ್ರಮಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಮನೆಯವರು ಬಂದು ಸಂತೋಷದ ಕ್ಷಣಕ್ಕೆ ಸಾಥ್ ನೀಡಿದ್ರು.ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ರು..ಅಂತು ಈ ಸಂತಸದ ಗಳಿಗೆಗೆ ಎಲ್ಲರೂ ಸಾಕ್ಷಿಯಾದ್ರು…
ಇದೇ ವೇಳೆ ಪೌರಕಾರ್ಮಿಕರ ದಿನಾಚರಣೆ 2023ನೇ ಸಾಲಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರ ಪಂಚಾಯತ್ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ “ನಗರವನ್ನು ಸ್ವಚ್ಛ ಮಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಮತ್ತು ಸೇವೆ ಶ್ಲಾಘನೀಯವಾದುದು ಎಂದರು. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳನ್ನು ನಿಮ್ಮೆಲ್ಲರ ಸಹಕಾರದಿಂದ ಮಾಡಲಿದ್ದೇನೆ. ನಗರದ ಸ್ವಚ್ಛತೆಗೆ ನಗರದ ಜನತೆ ಸಹಕಾರ ನೀಡಬೇಕಾಗಿದೆ. ಸ್ವಚ್ಛ ಭಾರತ್ ಕಲ್ಪನೆಯ ಕನಸು ಯಶಸ್ವಿಯಾಗುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ವರ್ತಕ ಸಂಘದ ಅಧ್ಯಕ್ಷ ಸುಧಾಕರ್ ರೈ , ನಗರ ಪಂಚಾಯತ್ ಸದಸ್ಯರಾದ ವೆಂಕಪ್ಪ ಗೌಡ , ಮುಖ್ಯ ಅಧಿಕಾರಿ ಸುಧಾಕರ್ ಹಾಗೂ ನಗರ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಪೌರ ಕಾರ್ಮಿಕರು, ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆಲಸದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ಸಾಲು, ಫಲ-ಪುಷ್ಪ ನೀಡಿ ಸನ್ಮಾನಿಸಲಾಯಿತು. ಸುಳ್ಯ ನಗರ ಪಂಚಾಯತ್ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಸುಳ್ಯ ನಗರ ಪಂಚಾಯತ್ ಕಚೇರಿ ಪರಿಸರದಲ್ಲಿ ಇಂದು ಹಬ್ಬದ ವಾತಾವರಣವೇ ಕಳೆಗಟ್ಟಿತ್ತು.
ಇತ್ತ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧಾ ಕಾರ್ಯಕ್ರಮವನ್ನು ನಗರ ಪಂಚಾಯತಿ ಸದಸ್ಯರು ಮತ್ತು ಮುಖ್ಯ ಅಧಿಕಾರಿ ಪೌರ ಕಾರ್ಮಿಕರ ಮುಖಂಡರು ಗಿಡಕ್ಕೆ ನೀರು ಹಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಬೆಳಗ್ಗಿನ ವೇಳೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತಿ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬುದ್ಧನಾÊಕ್ ,ವರ್ತಕ ಸಂಘದ ಅಧ್ಯಕ್ಷ ವರ್ತಕ ಸಂಘದ ಅಧ್ಯಕ್ಷ ಸುಧಾಕರ್ ರೈ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ಬಾಲಕೃಷ್ಣ ಭಟ್ ಕೊಡಂಕೇರಿ, ಶೀಲಾ ಅರುಣ್ ಕುರುಂಜಿ, ಶಶಿಕಲಾ ನೀರಬಿದ್ರೆ, ಹಾಗೂ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಗೋಣಿಚೀಲ ಓಟ, ಗುಂಡೆಸೆತ, ನಿಂಬೆ ಚಮಚ ಓಟ, ಬಕೇಟಿಗೆ ಬಾಲ್ ಹಾಕುವುದು, ಮಡಕೆ ಒಡೆಯುವುದು,ವಿಕೇಟಿಗೆ ರಿಂಗ್ ಹಾಕುವುದು ಹಾಗೂ ಪೌರಕಾರ್ಮಿಕರ ಮಕ್ಕಳಿಗೆ 50 ಮೀಟರ್ ಓಟ, ಕಪ್ಪೆ ಜಿಗಿತ, ಸಂಗೀತ ಕುರ್ಚಿ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಇಂದು ಸಂಜೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಕೂಡ ಜರುಗಲಿದೆ.