ನ್ಯೂಸ್ ನಾಟೌಟ್: ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರವಾಗಿರುವ ಸುಬ್ರಹ್ಮಣ್ಯ ದೇವಳ ಸಂಪರ್ಕಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ದಿನ ಮುಂಜಾನೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹಾಗೂ ಸಂಜೆ ಮಂಗಳೂರಿನಿಂದ ಸುಬ್ರಹ್ಮಣಕ್ಕೆ ಪ್ಯಾಸೆಂಜರ್ ರೈಲು ಒದಗಿಸುವ ಬೇಡಿಕೆಗೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಕರಾವಳಿ ಭಾಗದ ಜನತೆಯ ಹಲವಾರು ಬೇಡಿಕೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಂಗಳೂರಿನಿಂದ ಗೋವಾಗೆ ಅಕ್ಟೋಬರ್ ಅಂತ್ಯದೊಳಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಒದಗಿಸುವ ಬಗ್ಗೆ ಭರವಸೆ ಲಭಿಸಿದೆ. ಅಲ್ಲದೇ, ಬೆಂಗಳೂರು ಕಣ್ಣೂರು ರೈಲನ್ನು ಕೊಚ್ಚಿನ್ ವರೆಗೆ ವಿಸ್ತರಿಸಬೇಕು ಎನ್ನುವ ಕೇರಳಿಗರ ಒತ್ತಾಯಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದು ಸಂಸದ ನಳಿನ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಅಂತಹ ಯಾವುದೇ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೈಲ್ವೆ ಇಲಾಖೆಯನ್ನು ಕೇರಳ ಹಿಡಿತದಿಂದ ತಪ್ಪಿಸಲು ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಮನವಿಗೆ ಸಚಿವರು ಅಗತ್ಯ ಸೂಚನೆ ನೀಡಿದ್ದಾರೆ. ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆಗಳ ವಿಭಾಗಳ ನಡುವೆ ಸಂಚರಿಸುವ ರೈಲುಗಳ ಅನಗತ್ಯ ವಿಳಂಬ ನಿವಾರಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರೈಲ್ವೆ ಸಚಿವರು ಸೂಚಿಸಿದ್ದಾರೆ ಎಂದು ಸಂಸದ ನಳಿನ್ ತಿಳಿಸಿದ್ದಾರೆ.