ನ್ಯೂಸ್ ನಾಟೌಟ್ : ತಂದೆ-ತಾಯಿ ಹಾಗೂ ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ.ಫೋಷಕರು ತನ್ನ ಮಕ್ಕಳು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು,ಜನರ ಮುಂದೆ ಸಾಧಕರಾಗಬೇಕು ಎಂದು ಏನೇನೋ ಕನಸು ಕಾಣುತ್ತಾರೆ.ತಾವು ಕೂಲಿ ಕೆಲಸ ಮಾಡುತ್ತಿದ್ದರೂ ಪರವಾಗಿಲ್ಲ ನಾವು ಪಡುವ ಕಷ್ಟ ಮಕ್ಕಳಿಗೆ ಬರಬಾರದೆನ್ನುತ್ತಾ ಇಡೀ ಜೀವನವನ್ನೇ ಮಕ್ಕಳಿಗಾಗಿ ಮುಡುಪಾಗಿಡುವ ಎಷ್ಟೋ ಪೋಷಕರು ಉದಾಹರಣೆಯಾಗಿ ನಿಲ್ಲುತ್ತಾರೆ.
ಅದರಲ್ಲೂ ತಾಯಿ – ಮಕ್ಕಳ ಸಂಬಂಧ ಇನ್ನೂ ಹತ್ತಿರವಾಗಿರುತ್ತೆ.ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವವಳೇ ತಾಯಿ.ಪ್ರತಿ ಹೆಜ್ಜೆಯಲ್ಲಿಯೂ ತಾಯಿ ನೆರಳಾಗಿ ನಿಲ್ಲುತ್ತಾಳೆ.ಮಗುವಿಗೆ ಸಣ್ಣ ನೋವಾದಾಗಲೂ ಗಾಬರಿಯಿಂದ ಶುಶ್ರೂಷೆ ಮಾಡುತ್ತಾಳೆ.ಹೀಗೆ ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಪ್ರತಿ ಕ್ಷಣವೂ ಗಮನಿಸುತ್ತಾ ಮಕ್ಕಳನ್ನು ಬೆಳೆಸುತ್ತಾಳೆ. ದೊಡ್ಡವರಾದ ಬಳಿಕ ಕೆಲವು ಮಕ್ಕಳು ಇದೆಲ್ಲವನ್ನು ಮರೆತು ಬದುಕುವವರು ಇದ್ದರೆ, ಇನ್ನೂ ಕೆಲವು ಮಕ್ಕಳು ತಂದೆ-ತಾಯಿಗಾಗಿ ಪ್ರಾಣವನ್ನೇ ಮುಡುಪಾಗಿಟ್ಟುಕೊಳ್ಳುತ್ತಾರೆ.
ಹೌದು,ಇಂತಹ ತಾಯಿ-ಮಗನ ಭಾವನಾತ್ಮಕ ಸಂಬಂಧದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಉದ್ಯೋಗ ಅಂತ ಹೇಳಿ ವಿದೇಶಕ್ಕೆ ತೆರಳಿದ್ದ ಯುವಕನೋರ್ವ ಕಳೆದೆರೆಡು ದಿನಗಳ ಹಿಂದೆ ಯಾರಿಗೂ ಮಾಹಿತಿ ನೀಡದೆ ಬರೋಬ್ಬರಿ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ್ದಾನೆ. ಈ ವೇಳೆ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಬಂದಿದ್ದಾನೆ.ಅಪರಿಚಿತನಂತೆ ತೆರಳಿ ಮೀನು ಖರೀದಿಸಿದ್ದಾನೆ. ಅಮ್ಮನನ್ನು ಮಾತನಾಡಿಸಿದ್ದಾನೆ.ಮುಖಕ್ಕೆ ಮಾಸ್ಕ್ ಹಾಕಿ, ತಲೆಗೆ ಟವೆಲ್ ಸುತ್ತಿ ತಾಯಿಯೊಂದಿಗೆ ಮೀನುಗಳ ರೇಟ್ ಬಗ್ಗೆ ವಿಚಾರಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಈತ ಕುಂದಾಪುರದ ಗಂಗೊಳ್ಳಿ ನಿವಾಸಿಯಾದ ರೋಹಿತ್. ಕಳೆದ 3 ವರ್ಷಗಳ ಹಿಂದೆ ದುಬಾೖಗೆ ತೆರಳಿದ್ದ. ಬಳಿಕ ತಾಯ್ನಾಡಿಗೆ ಮರಳಿದ್ದ.ಅಲ್ಲಿಂದ ಹೊರಡುತ್ತಿರುವಾಗಲೇ ಮನೆಯವರಿಗೆ, ಮಿತ್ರರಿಗೆ ದಿಢೀರ್ ಅಚ್ಚರಿ ಕೊಡಬೇಕೆಂದು ಹೇಳಿ ತಾನು ಬರುವ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ.ಮನೆಗೆ ಬಂದಾಗ ಮನೆಮಂದಿ ರೋಹಿತ್ನನ್ನು ಅಚ್ಚರಿ, ಖುಶಿಯಿಂದ ಎದುರುಗೊಂಡರು.ಆದರೆ ತಾಯಿ ಸುಮಿತ್ರಾ ಮಾತ್ರ ಮನೆಯಲ್ಲಿ ಇಲ್ಲದೇ ಯುವಕನಿಗೆ ಬಾರಿ ಬೇಜಾರಾಯ್ತು. ಬೇಸರಗೊಂಡ ಯುವಕ ರೋಹಿತ್ ನೇರವಾಗಿ ಗಂಗೊಳ್ಳಿ ಬಂದರಿನ ಬಳಿ ಬಂದಿದ್ದಾನೆ.ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿ ಮೀನು ಕೊಡುವಂತೆ ಕೇಳಿದ್ದಾನೆ.
ಅಮ್ಮನಿಗೆ ಗುರುತು ಸಿಗಬಾರದೆಂದು ಟೋಪಿ, ಕನ್ನಡಕ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಮೀನು ಖರೀದಿಯ ನಾಟಕವಾಡಿದ್ರೂ ಹೆತ್ತಮ್ಮನಿಗೆ ತನ್ನ ಮಗುವಿನ ಪರಿಚಯ ಸಿಗದಿರುವುದೇ?ಗ್ರಾಹಕನ ಹಾವಭಾವ,ಸ್ವರ ಗಮನಿಸಿದ ಹೆತ್ತ ಕರುಳು ಇದು ತನ್ನ ಮಗನೇ ಎಂದು ಗುರುತಿಸಿದೆ. ತತ್ಕ್ಷಣ ಮಗನನ್ನು ಬಿಗಿದಪ್ಪಿ ಆನಂದಬಾಷ್ಪ ಹರಿಸಿದಳು.ತನ್ನ ಮಗನ ಕಂಡು ತಾಯಿಗೆ ಕೆಲಕಾಲ ಏನು ಹೇಳಬೇಕೆಂದೇ ತೋಚಲಿಲ್ಲ. ಕಣ್ಣೊರೆಸುತ್ತಿರುವುದರಲ್ಲೇ ಬ್ಯುಸಿಯಾಗಿದ್ದರು.ಈ ದೃಶ್ಯ ವೈರಲ್ ಆಗಿರುವ ವೀಡಿಯೋದಲ್ಲಿ ದಾಖಲಾಗಿದೆ.ಈ ದೃಶ್ಯ ನೋಡಿದ ನೆಟ್ಟಿಗರು ಅಬ್ಬಾ..ಈ ದೃಶ್ಯ ತುಂಬಾ ಭಾವನಾತ್ಮಕವಾಗಿತ್ತು ಎಂದು ಹೇಳಿದ್ದಾರೆ.