ನ್ಯೂಸ್ ನಾಟೌಟ್: ಉದ್ಯಮಿಗೆ ಚೈತ್ರಾ ಕುಂದಾಪುರ 5 ಕೋಟಿ ರೂ. ವಂಚನೆ ಪ್ರಕರಣ ದಿನಕ್ಕೊಂದು ಬೆಳವಣಿಗೆ ಮತ್ತು ತಿರುವು ಕಾಣುತ್ತಿದ್ದು, ಹಾಲಶ್ರೀ ಬಂಧನದ ಬಳಿಕ ಪ್ರಕರಣ ಮತ್ತಷ್ಟು ಕಾವು ಪಡೆದಿದೆ. ಪ್ರಕರಣದ ಎ3 ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿಯನ್ನು ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಗಡಗಲಿ ಮಠದಲ್ಲಿ ಮಹಜರು ನಡೆಸಿದ್ದಾರೆ ಎನ್ನಲಾಗಿದೆ.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠದಲ್ಲಿ ಈ ಹಾಲಶ್ರೀ ಕರ್ಮಕಾಂಡದ ಬಗ್ಗೆ 2 ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಮಠಕ್ಕೆ ಹಾಲಶ್ರೀ ಪ್ರವೇಶವಾಗುತ್ತಿದಂತೆ ತೆಂಗಿನಕಾಯಿ ಒಡೆದು ಸ್ವಾಗತ ಮಾಡಿದರು. ಮಠದ ಒಳಗೆ ಹೋಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನೊಬ್ಬರನ್ನೇ ರೂಂ ನೊಳಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.
ಹಾಲಶ್ರೀ ಇರುತ್ತಿದ್ದ ರೂಂನೊಳಗೆ ಸಿಸಿಬಿ ಪೊಲೀಸರು ಕುಟುಂಬಸ್ಥರನ್ನು ಒಳಗಡೆ ಬಿಡದೆ ಹಾಲಶ್ರೀ ಜೊತೆಗೆ ಮಹಜರು ನಡೆಸಿದರು. ಹಾಲಶ್ರೀ ಜೊತೆಗೆ ಕುಟುಂಬಸ್ಥರು ಮಾತನಾಡಲು ಅವಕಾಶ ಕೇಳಿದರು. ಒಳಗಡೆ ಅವಕಾಶ ಇಲ್ಲ, ಹೊರಗಡೆ ಬಂದಾಗಲೇ ಮಾತನಾಡಲು ಹೇಳಿದರು. ಆದರೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಹಾಲಶ್ರೀ ಮುಜುಗರಗೊಂಡು, ಕುಟುಂಬಸ್ಥರು ಏನೇ ಕೇಳಿದರೂ ಉತ್ತರಿಸಲಿಲ್ಲ ಎನ್ನಲಾಗಿದೆ.
ಊಟ ಮಾಡಿ ಹೋಗಿ ಎಂದು ಮನವಿ ಮಾಡಿದಾಗ, ಇಲ್ಲ ಅವರ ಊಟ ಆಗಿದೆ. ನಾವು ಯಾರೂ ಊಟ ಮಾಡಲ್ಲ ನಮ್ಮ ಊಟ ಆಗಿದೆ ಎಂದು ಹೇಳಿ ಹಾಲಶ್ರೀ ಯನ್ನು ಮಹಜರು ಮಾಡಿ ಕರೆದುಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸಿವೆ.
ಮಹಜರು ವೇಳೆ ಏನೆಲ್ಲಾ ಮಾಡಿದರು ಎಂಬುವುದರ ಬಗ್ಗೆ ಕುಟುಂಬಸ್ಥರಿಗೆ ಸುಳಿವು ಸಹ ಸಿಸಿಬಿ ಪೊಲೀಸರು ಬಿಟ್ಟುಕೊಟ್ಟಿಲ್ಲ. ಪತ್ನಿ, ತಂದೆ ಹಾಗೂ ಚಿಕ್ಕಪ್ಪಂದಿರು ಏನೇ ಕೇಳಿದರೂ, ಹಾಲಶ್ರೀ ಉತ್ತರಿಸದೆ ಕೈ ಸನ್ನೆ ಮಾಡಿದರೆ ಹೊರತು, ಮಾತನಾಡಿಲ್ಲ. ಹಾಕಿಕೊಂಡಿದ್ದ ಮಾಸ್ಕ್ ಸಹ ಕುಟುಂಬಸ್ಥರ ಮುಂದೆ ತೆಗೆಯದೆ ಹಾಗೆಯೇ ಸಿಸಿಬಿ ಪೊಲೀಸರ ಜೊತೆಗೆ ತೆರಳಿದರು ಎನ್ನಲಾಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇