ನ್ಯೂಸ್ ನಾಟೌಟ್ :ಮಕ್ಕಳು ದೇವರಿಗೆ ಸಮಾನ.ಅವರೇನು ತಪ್ಪುಗಳನ್ನು ಮಾಡಿದ್ರೂ ಅರಿವಿಲ್ಲದೇ ಮಾಡುತ್ತಾರೆಂದು ಕ್ಷಮಿಸಿ ಬಿಡ್ತಾರೆ.ಇನ್ನೂ ಕೆಲವರು ಇದ್ದಾರೆ.ಮನೆಯಲ್ಲಿ ಗಂಡ-ಹೆಂಡತಿ ಪರಸ್ಪರ ಜಗಳವಾಡಿಕೊಂಡ್ರೆ ಹೆಂಡತಿ ಅಥವಾ ಗಂಡ ಆ ಸಿಟ್ಟನ್ನ ಮಕ್ಕಳ ಮೇಲೆ ತೀರಿಸೋದಿದೆ.ಆದರೆ ಇಲ್ಲೊಬ್ಬ ಪೇದೆ ಏನು ಮಾಡಿದ್ದಾನೆ ನೋಡಿ..ನಿಜಕ್ಕೂ ಇದೊಂದು ಬೆಚ್ಚಿ ಬೀಳಿಸುವ ದುರಂತವೆಂದೇ ಹೇಳಬಹುದು.
ಹೆಂಡತಿ ಜತೆ ಜಗಳವಾಡಿಕೊಂಡು ಕೋಪದ ಭರದಲ್ಲಿ ತನ್ನದೇ ಮಗುವನ್ನು ನೆಲಕ್ಕಪ್ಪಳಿಸಿ ಮಗುವಿನ ಬದುಕನ್ನೇ ಕತ್ತಲಾಗಿಸಿದ ಘಟನೆ ವರದಿಯಾಗಿದೆ. ಈ ಕೆಲಸ ಮಾಡಿದ್ದು ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಈ ಘನಘೋರ ಘಟನೆ ನಡೆದಿದೆ.
ಈ ಪೇದೆಯ ಮಗುವಿಗಿನ್ನೂ ನಾಲ್ಕೇ ತಿಂಗಳು ಆಗಿತ್ತಷ್ಟೆ.ಅಷ್ಟರಲ್ಲೇ ಆಕೆಯ ಬಾಳನ್ನೇ ಚಿವುಟಿ ಬಿಟ್ಟಿದ್ದಾನೆ.ಈ ಕೃತ್ಯ ನಡೆಸಿದ ಕ್ರೂರಿ ಪೊಲೀಸ್ ಕಾನ್ಸ್ಟೇಬಲ್ ಹೆಸರು ಬಸಪ್ಪ ಬಾಳುಬಂಕಿ. ಬಸಪ್ಪ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ಟೇಬಲ್ ಆಗಿದ್ದಾನೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ಮೂಲತಃ ಗೋಕಾಕ ತಾಲೂಕಿನ ದುರುದುಂಡಿ ಗ್ರಾಮದವನು ಎಂದು ತಿಳಿದು ಬಂದಿದೆ.
ಬಸಪ್ಪ ಬಾಳುಬಂಕಿ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದ. ಪತ್ನಿ ಲಕ್ಷ್ಮೀ ಹೆರಿಗೆಗಾಗಿ ತವರಿಗೆ ಬಂದಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಭಾರಿ ಸಂತಸದಿಂದಿದ್ದರು. ಇದೇ ಸಂದರ್ಭ ಸೆ.18ರಂದು ಚಿಂಚುಲಿ ಗ್ರಾಮಕ್ಕೆ ಬಂದ ಬಸಪ್ಪ ಮಗುವನ್ನು ದುರದುಂಡಿಯ ಜಾತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ.
ಆದರೆ ಮಗುವಿಗೆ ೪ ತಿಂಗಳು ಆಗಿದ್ದಷ್ಟೇ.ಹೊರಗಡೆಯ ವಾತಾವರಣ ಮಗುವಿಗೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದಲೋ ಏನೋ ಹೆಂಡತಿ ‘ಇಷ್ಟು ಚಿಕ್ಕ ಮಗುವನ್ನು ಜಾತ್ರೆಗೆ ಕರೆದೊಯ್ಯುವುದು ಬೇಡ’ವೆಂದು ಪತ್ನಿ ಹೇಳಿದ್ದಾಳೆ. ಆದರೂ ಕೇಳದೇ ಮಗುವನ್ನು ಬೈಕ್ನಲ್ಲಿ ಕರೆದೊಯ್ಯಲು ಮುಂದಾಗಿದ್ದಾನೆ.ಈ ವೇಳೆ ಪತ್ನಿ ನಾಲ್ಕು ತಿಂಗಳ ಮಗುವನ್ನು ಬೈಕ್ನಲ್ಲಿ ಕರೆದೊಯ್ಯುವುದು ಬೇಡ ಎಂದು ತಡೆದಿದ್ದಾಳೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪಿತ್ತ ನೆತ್ತಿಗೇರಿದ ಪತಿ ಹೆಂಡತಿಯೊಂದಿಗೆ ತೀವ್ರ ಗಲಾಟೆಗಳಿದಿದ್ದಾನೆ. ಇಬ್ಬರ ನಡುವೆ ವಾಕ್ಸಮರ ಮುಂದುವರಿಯಿತು. ಕೋಪದ ಭರದಲ್ಲಿ ಬಸಪ್ಪ ಏನೂ ಅರಿಯದ ಕಂದಮ್ಮನನ್ನು ಎತ್ತಿ ನೆಲಕ್ಕೆಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಘಟನೆ ಬಳಿಕ ಬಸಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಪತ್ನಿ ದೂರು ನೀಡಿದ್ದು, ಕುಡಚಿ ಪೊಲೀಸರು ಬಸಪ್ಪನನ್ನು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ದೂರು ಕೂಡ ಈತನ ಮೇಲೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇