ನ್ಯೂಸ್ ನಾಟೌಟ್: ಸುಳ್ಯ ಕಾಂಗ್ರೆಸ್ನಲ್ಲಿ ಆರಂಭಗೊಂಡ ಹಲವಾರು ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದ್ದು, ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು. ಹಳೆಯದನ್ನು ಮರೆತು ಎಲ್ಲರೂ ಒಂದಾಗೋಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದರು.
ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಸೋಮವಾರ (ಸೆ.18 ) ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗಲೇ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕವಾಗುತ್ತಿದೆ. ಇದು ಹೀಗೆ ಮುಂದುವರಿದರೆ ಎಲ್ಲಾ ಸಮಿತಿಗಳಿಗೆ, ದೇವಸ್ಥಾನದ ಸಮಿತಿಗಳಿಗೆ ಬಿಜೆಪಿಯವರೇ ನೇಮಕವಾಗುವ ಸಾಧ್ಯತೆಯಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ಅಕ್ರಮ ಸಕ್ರಮ ಸಮಿತಿಯ ಲೋಪವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಪಕ್ಷದಲ್ಲಿ ಈ ಹಿಂದೆ ನಡೆದ ಘಟನೆಯ ಬಗ್ಗೆ ವೆಂಕಪ್ಪ ಗೌಡ ಭಾವುಕರಾದರು. ಯಾವುದೇ ತಪ್ಪು ಮಾಡದೆ, ಪಕ್ಷಕ್ಕಾಗಿ ನಿರಂತರ ದುಡಿಯುತ್ತಿದ್ದ ನನಗೆ ಪಕ್ಷದಿಂದ ಶೋಕಾಸ್ ನೋಟೀಸ್ ಬಂದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅಮಾನತು ಮಾಡಿರುವುದು ತನಗೆ ಅತ್ಯಂತ ನೋವು ತಂದಿದೆ ಎಂದರು. ಶೋಕಾಸ್, ಅಮಾನತು ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು, ಶೋಕಾಸ್, ಅಮಾನತು, ಉಚ್ಚಾಟನೆಯನ್ನು ಕೂಡಲೇ ಹಿಂಪಡೆಯಲು ಅವರು ಸೂಚಿಸಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ಸುಳ್ಯ ತಾಲೂಕಿನ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಸದಸ್ಯರ ನೇಮಕವಾಗಿದೆ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಿದ್ದು, ತಕ್ಷಣ ರದ್ದುಗೊಳಿಸಬೇಕು ಎಂಬ ಆಗ್ರಹ ಕೇಳಿಬಂತು.
ಹಿರಿಯರಾದ ಬಾಲಕೃಷ್ಣ ಮರೀಲ್, ರವೀಂದ್ರ ರುದ್ರಪಾದ ಪರಶುರಾಮ ಚಿಲ್ಲಡ್ಕ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಆದ ತಪ್ಪುಗಳನ್ನು ಸರಿಮಾಡಿ ಎಲ್ಲವನ್ನೂ ಮರೆತು ಒಟ್ಟಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ತಿಳಿಸಿದರು.
ದಿನೇಶ್ ಸರಸ್ವತಿ ಮಹಲ್, ಬಾಲಕೃಷ್ಣ ಭಟ್ ಕೊಡೆಂಕೇರಿ, ಸತ್ಯಕುಮಾರ್ ಆಡಿಂಜ, ಬಶೀರ್ ಅಹಮ್ಮದ್, ಚಂದ್ರಶೇಖರ ಕೋನಡ್ಕ, ಚೇತನ್ ಕಜೆಗದ್ದೆ ಮಾತನಾಡಿದರು. ಶಶಿಧರ ಎಂ.ಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭವಾನಿ ಶಂಕರ ಕಲ್ಮಡ್ಕ ವಂದಿಸಿದರು.
ಪ್ರಮುಖರಾದ ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕೆ.ಗೋಕುಲ್ದಾಸ್, ಧೀರಾ ಕ್ರಾಸ್ತಾ, ಜಿ.ಕೆ.ಹಮೀದ್ ಗೂನಡ್ಕ, ರಹೀಂ ಬೀಜದಕಟ್ಟೆ, ಎಸ್.ಕೆ.ಹನೀಫ, ಶ್ರೀಲತಾ ಪ್ರಸನ್ನ ತಾಜುದ್ದೀನ್ ಅರಂತೋಡು, ಶಿವಕುಮಾರ್ ಕಂದಡ್ಕ, ಪವನ್ ಮುಂಡ್ರಾಜೆ, ಉಮ್ಮರ್ ಕುರುಂಜಿಗುಡ್ಡೆ, ಸಲೀಂ ಪೆರುಂಗೋಡು, ಅಬ್ದುಲ್ ಬಶೀರ್ ಸಪ್ನಾ ಲತೀಫ್, ರವೀಂದ್ರ ಪೂಜಾರಿ, ಮುಜೀಬ್ ಪೈಚಾರ್, ಆರ್.ಬಿ.ಪೈಚಾರ್, ಕೇಶವ ಕೊಳಲುಮೂಲೆ, ನಿತ್ಯಾನಂದ ಕುಕ್ಕುಂಬಳ ಮತ್ತಿತರರು ಭಾಗವಹಿಸಿದ್ದರು.