ನ್ಯೂಸ್ ನಾಟೌಟ್ : ಉದ್ಯಮಿಯಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ, ಸರ್ಕಾರ ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನವನ್ನು ಅವರ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ವಂಚನೆ ಕೃತ್ಯದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನಂತೆ ನಟಿಸಿದ್ದ ಆರೋಪಿ ಚನ್ನನಾಯ್ಕ್ ಬಳಸಿದ್ದ ಕಾರು ಸಾಲು ಮರದ ತಿಮ್ಮಕ್ಕ ನಿಗೆ ಸೇರಿದ್ದು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಗೋವಿಂದ ಬಾಬು ಪೂಜಾರಿಯನ್ನು ನಂಬಿಸಲು ಆರೋಪಿಗಳು, ತಿಮ್ಮಕ್ಕ ಅವರ ಸರಕಾರಿ ಕಾರು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಸಿಸಿಬಿ ಮೂಲಗಳು ಹೇಳಿವೆ.
ವಂಚನೆ ಪ್ರಕರಣದ ಮತ್ತೊಬ್ಬ ಆರೋಪಿ ಗಗನ್ ಕಡೂರು ಮತ್ತು ಉಮೇಶ್ ಆತ್ಮೀಯರಾಗಿದ್ದರು. ವಿಧಾನಸೌಧದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ನೀಡಲಾಗಿರುವ ಕೊಠಡಿಯ ನವೀಕರಣ ಜವಾಬ್ದಾರಿಯನ್ನು ಗಗನ್ ವಹಿಸಿಕೊಂಡಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಆರೋಪ ನಿರಾಕರಿಸಿರುವ ಸಾಲುಮರದ ತಿಮ್ಮಕ್ಕ ಮತ್ತು ಅವರ ದತ್ತು ಪುತ್ರ ಉಮೇಶ್, ಚೈತ್ರಾ ಕುಂದಾಪುರ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಗಗನ್ ಕಡೂರು ಅವರಿಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಹೇಳಿದ್ದಾರೆ.
ಬಳ್ಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘‘ಗಗನ್ ಕಡೂರು ಅವರ ಪರಿಚಯವಿದ್ದು, ಅವರು ಅಖಿಲ ಭಾರತ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಸದಸ್ಯರಾಗಿದ್ದಾರೆ. ನಾನೂ ಟ್ರಸ್ಟ್ ಅಧ್ಯಕ್ಷನಾಗಿರುವುದರಿಂದ ಅವರ ವಿವಾಹಕ್ಕೆ ಸಾಲುಮರದ ತಿಮ್ಮಕ್ಕ ಅವರೊಂದಿಗೆ ನಾನೂ ಹೋಗಿದ್ದು ನಿಜ. ಪರಿಚಯ ಇದ್ದ ಮಾತ್ರಕ್ಕೆ ನಮ್ಮ ಹೆಸರನ್ನು ಅವರೊಟ್ಟಿಗೆ ತಾಳೆ ಹಾಕುವುದು ಸರಿಯಲ್ಲ. ದೃಶ್ಯ ವಾಹಿನಿಯೊಂದರಲ್ಲಿ ಪ್ರಸಾರ ಮಾಡಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ,’’ ಎಂದು ತಿಳಿಸಿದರು.
‘‘ಚೈತ್ರಾ ಕುಂದಾಪುರ ಪ್ರಕರಣದಲ್ಲಿಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕಿದೆ. ಸಿಸಿಬಿ ಅಧಿಕಾರಿಗಳು ಪ್ರಕರಣದ ಕೆಲವರನ್ನು ವಶಕ್ಕೆ ಪಡೆದಿದ್ದು ಅವರೇನಾದರೂ ಸಾಲುಮರದ ತಿಮ್ಮಕ್ಕನವರ ಹೆಸರು ಹೇಳಿದ್ದಾರಾ?. ಕಾರು ದುರ್ಬಳಕೆ ಮಾಡಿದ್ದಾರೆಂಬ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ” ಎಂದು ಕೇಳಿದ್ದಾರೆ.
ಈ ನಡುವೆ, ಪ್ರಕರಣದ ದೂರುದಾರ ಗೋವಿಂದಬಾಬು ಪೂಜಾರಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ”ಚೈತ್ರಾ ಅವರಿಗೆ ಕೊಟ್ಟಿದ್ದಾರೆ ಎನ್ನಲಾದ 5 ಕೋಟಿ ರೂ. ಹಣದ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಗೋವಿಂದ ಬಾಬುಗೆ ಸೂಚಿಸಿದ್ದೇವೆ. ಆರೋಪಿಗಳಿಗೆ ನಗದು, ಚೆಕ್, ನೆಟ್ ಬ್ಯಾಂಕಿಂಗ್ ಹೀಗೆ ಯಾವ ರೂಪದಲ್ಲಿ ಹಣ ಕೊಡಲಾಗಿದೆ? ಎಲ್ಲೆಲ್ಲಿ ಹಣ ಕೊಡಲಾಗಿದೆ ಎಂಬ ಮಾಹಿತಿಯ ಅಗತ್ಯವಿದೆ. ಹೀಗಾಗಿ, ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ,” ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.