ನ್ಯೂಸ್ ನಾಟೌಟ್: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ ಬಿದ್ದು ನಿಜ ಬಯಲಾಗುತ್ತಿದಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಜನರು ವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ .
ಚೈತ್ರಾ ಓಡಾಡಿದ ಜಾಗವನ್ನು ಗ್ರಾಮಸ್ಥರು ಸೇರಿ ತೀರ್ಥ ಹಾಕಿ ಶುದ್ಧ ಮಾಡಿದ ಘಟನೆ ನಡೆದಿದ್ದು, ಕಳೆದ ವರ್ಷ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚೈತ್ರಾ ಕುಂದಾಪುರ(Chaitra Kundapura) ಚಿಕ್ಕ ವಿಷಯವನ್ನ ದೊಡ್ಡದು ಮಾಡಿ ಭಾಷಣ ಮಾಡುವ ಮೂಲಕ ಗ್ರಾಮದಲ್ಲಿ ಎರಡು ಬಣಗಳ ನಡುವೆ ಗಲಾಟೆ ತಂದಿಟ್ಟಿದ್ದರಂತೆ. ಹೀಗಾಗಿ ಗ್ರಾಮ ದೇವರಿಗೆ ಚೈತ್ರಾ ವಿರುದ್ಧ ಪ್ರಾರ್ಥನೆ ಮಾಡಿ, ಒಂದು ವರ್ಷದೊಳಗೆ ಶಿಕ್ಷೆ ಕೊಡುವಂತೆ ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದರು ಈಗ ಅದು ಪಲಿಸಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
2022, ಅಕ್ಟೋಬರ್ 4 ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ್ತಿಯಾಗಿ ಚೈತ್ರ ಕುಂದಾಪುರ ಆಗಮಿಸಿದ್ದರು. ಈ ವೇಳೆ ಎರಡು ಕೋಮುಗಳ ನಡುವೆ ಗಲಾಟೆಯಾಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅಂದೇ ಗ್ರಾಮಸ್ಥರು ಚೈತ್ರಾ ಭಾಷಣವನ್ನು ವಿರೋಧಿಸಿ ದೇವರಿಗೆ ಪ್ರಾರ್ಥನೆ ಮಾಡಿದ್ದರು ಎನ್ನಲಾಗಿದೆ. ಇದೀಗ ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿಳುತ್ತಿದ್ದಂತೆ ದೇವರಿಗೆ ವಿಶೇಷ ಪೂಜೆ ನಡೆಸಿದ ಗ್ರಾಮಸ್ಥರು, ಹರಕೆ ತಿರಿಸಿದ ವಿಶೇಷ ಘಟನೆ ಬೆಳಕಿಗೆ ಬಂದಿದೆ.
ಇನ್ನು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದುವರೆ ಕೋಟಿ ಚೈತ್ರಾ ಕುಂದಾಪುರ ಪಡೆದಿದ್ದಳು.
ಇನ್ನೊಂದುವರೆ ಕೋಟಿಗೆ ಹೊಂಚು ಹಾಕಿದ್ದ ಸ್ವಯಂ ಘೋಷಿತ ಹಿಂದೂ ಹೆಣ್ಣು ಹುಲಿ ಖ್ಯಾತಿಯ ಚೈತ್ರಾ ಕುಂದಾಪುರ ಅರೆಸ್ಟ್ ಆಗಿದ್ದಾಳೆ. ಇದಾದ ಮೇಲೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರಿಗೆ ಮತ್ತಷ್ಟು ಆರೋಪಿಗಳು ಬಂಧಿಸಿದ್ದಾರೆ. ಈಗ ಚೈತ್ರಾ ಮತ್ತು ಸಂಗಡಿಗರ ಮೋಸದ ಆಟ ಒಂದೊಂದೇ ಬಯಲಾಗುತ್ತದೆ.