ನ್ಯೂಸ್ ನಾಟೌಟ್: ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಪ್ರಕರಣದ ಮೊದಲ ಆರೋಪಿ, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಗೆ ಸೇರಿದ ಸ್ವತ್ತುಗಳನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಇತರ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಿಸಿಬಿ ವಶದಲ್ಲಿ ಇರುವಾಗ ಗುರುವಾರ ಕುಸಿದು ಬಿದ್ದ ಆರೋಪಿ ಚೈತ್ರಾ ಕುಂದಾಪುರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ. ಸೆಪ್ಟೆಂಬರ್ 23ರ ತನಕ ಕೋರ್ಟ್ ಆಕೆಯನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸರ್ಚ್ ವಾರೆಂಟ್ ಪಡೆದು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದ್ದು, ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿ ಲಾಕರ್ನಲ್ಲಿದ್ದ ಆಸ್ತಿ ಪತ್ರ, ಬಂಗಾರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಳಾಗಿದೆ.
1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಚೈತ್ರಾ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಹಣ, ಚಿನ್ನವನ್ನು ಇಟ್ಟಿದ್ದಳು ಎನ್ನಲಾಗಿದ್ದು, ಉಡುಪಿಯ ಹಿರಿಯಡ್ಕದಲ್ಲಿ 2 ಅಂತಸ್ತಿನ ಮನೆಯನ್ನು ಕಟ್ಟಿಸುತ್ತಿದ್ದಳು. ಸಿಸಿಬಿ ಪೊಲೀಸರು ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಛೇರಿ, ಗೋವಿಂದರಾಜನಗರದಲ್ಲಿರುವ ಸ್ವಾಮೀಜಿ ನಿವಾಸ, ಕೆ. ಕೆ. ಗೆಸ್ಟ್ ಹೌಸ್ನ 2ನೇ ಮಹಡಿಯ 207 ಸಂಖ್ಯೆಯ ರೂಂ ಅಲ್ಲಿ ಮಹಜರು ನಡೆಸಿದ್ದಾರೆ. ಪ್ರಸಾದ್ ಬೈಂದೂರು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಹಿರಿಯಡ್ಕದಲ್ಲಿ 20 ಸೆಂಟ್ಸ್ ಜಾಗ ಖರೀದಿ ಮಾಡಿ 2 ಅಂತಸ್ತಿನ ಮನೆ ಕಟ್ಟಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದನೇ ಅಂತಸ್ತಿನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.
ಈ ವಂಚನೆ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಸ್ವಾಮೀಜಿಯೊಬ್ಬರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಪಡೆಯಲು ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ ಎನ್ನಲಾಗಿದೆ.