ನ್ಯೂಸ್ ನಾಟೌಟ್ : ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಬಾರದು ಅನ್ನುವ ನಿಯಮವಿದ್ದರೂ ಕಸ ಎಸೆದು ಹೋಗಿದ್ದ ವ್ಯಕ್ತಿಗೆ ಸುಳ್ಯ ನಗರ ಪಂಚಾಯತ್ 2 ಸಾವಿರ ರೂ. ದಂಡ ಹಾಕಿದೆ. ಸುಳ್ಯ ನಗರ ಪಂಚಾಯತ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಸೆಪ್ಟೆಂಬರ್ 12ರಂದು ತಡರಾತ್ರಿ ಸುಳ್ಯದ ರಥ ಬೀದಿಯಲ್ಲಿರುವ ರಿಕ್ಷಾ ಸ್ಟ್ಯಾಂಡ್ ಬಳಿ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕಸ ಎಸೆದು ಹೋಗಲಾಗಿತ್ತು. ಈ ಬಗ್ಗೆ ವಿಡಿಯೋ ಮಾಡಿದ್ದ ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಪ್ರಕಟಿಸುವಂತೆ ಕಳಿಸಿಕೊಟ್ಟಿದ್ದರು. ಈ ಬಗ್ಗೆ ಸೆ.14ರಂದು ನ್ಯೂಸ್ ನಾಟೌಟ್ ನಲ್ಲಿ “ಸುಳ್ಯ: ರಾತ್ರೋ ರಾತ್ರಿ ಕಸದ ಮೂಟೆಯನ್ನು ರಸ್ತೆಗೆಸೆದು ಎಸ್ಕೇಪ್..!,ಯಾರು ಈ ಕಿಡಿಗೇಡಿಗಳು?ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ” ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಈ ಬೆನ್ನಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ನಗರ ಪಂಚಾಯತ್ ಕಸದ ಒಳಗಡೆ ಇದ್ದ ಚೀಟಿಯಲ್ಲಿದ್ದ ಹೆಸರಿನ ಹಿಂದೆ ಬಿದ್ದು ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡವನ್ನು ಕಕ್ಕುವಂತೆ ಮಾಡಿದ್ದಾರೆ. ಮಾತ್ರವಲ್ಲ ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಬಾರದು ಎಂದು ಕಿವಿಮಾತು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.