ನ್ಯೂಸ್ ನಾಟೌಟ್ : ಕಾಂತಾರ ಕನ್ನಡ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಹಾಗೂ ತೆಲುಗಿನ ಖ್ಯಾತ ನಟ ಜ್ಯೂ.ಎನ್ಟಿಆರ್ ಇವರಿಬ್ಬರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ. ರಿಷಬ್ ಶೆಟ್ಟಿ ಕುಂದಾಪುರದವರಾಗಿದ್ದು,ಜ್ಯೂ.ಎನ್ಟಿಆರ್ ತಾಯಿ ಕುಂದಾಪುರದವರು ಹೀಗಾಗಿ ಇಡೀ ದೇಶವೇ ಗುರುತಿಸುವಂತಹ ನಟರಾಗಿದ್ದರೂ ಕೂಡ ಅವರಿಬ್ಬರೂ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ.
ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಫಿಲ್ಮ್ ಅವಾರ್ಡ್ಸ್ ೨೦೨೩(SIIMA 2023) ಈವೆಂಟ್ ದುಬೈನಲ್ಲಿ ನಡೆಯಿತು.ಸೆಪ್ಟೆಂಬರ್ 15ರಂದು ಕನ್ನಡ ಜತೆಗೆ ತೆಲುಗಿನ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ನೂರಾರು ನಟ-ನಟಿಯರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
‘RRR’ ಚಿತ್ರದ ನಟನೆಗಾಗಿ ಜ್ಯೂ. ಎನ್ಟಿಆರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ರಿಷಬ್ ಕೂಡ ಕಾಂತಾರ ಸಿನಿಮಾಗಾಗಿ ಅತ್ಯುತ್ತಮ ಹೀರೊ ಎಂಬ ಪ್ರಶಸ್ತಿ ಪಡೆದುಕೊಂಡರು. ಇದೀಗ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜ್ಯೂ. ಎನ್ಟಿಆರ್ ಹಾಗೂ ರಿಷಬ್ ಶೆಟ್ಟಿ ಕನ್ನಡ ಸಂಭಾಷಣೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಕನ್ನಡ ಮಾತನಾಡುತ್ತಿರುವುದು ಕಂಡು ಕನ್ನಡಿಗರು ಗುಣಗಾನ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ರಾಜರತ್ನ ಪುನೀತ್ ರಾಜ್ಕುಮಾರ್ ಅವರಿಗೆ ʼಕರ್ನಾಟಕ ರತ್ನʼ ನೀಡಿದ ಸಮಯದಲ್ಲೂ ಜ್ಯೂ. ಎನ್ಟಿಆರ್ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಜ್ಯೂ. ಎನ್ಟಿಆರ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ಎನ್ಟಿಆರ್ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಡಾ. ರಾಜ್ಕುಮಾರ್ ಕುಟುಂಬದ ಜತೆಗೂ ಆತ್ಮೀಯ ಒಡನಾಟವಿದೆ.
ರಿಷಬ್ ಪ್ರಶಸ್ತಿ ಪಡೆದ ಬಳಿಕ ವೇದಿಕೆ ಮುಂಭಾಗ ಕುಳಿತಿದ್ದ ಜ್ಯೂ. ಎನ್ಟಿಆರ್ ಕೂಡ ಅಭಿನಂದಿಸಿದ್ದಾರೆ. ಆ ಸಮಯದಲ್ಲಿ ನಿರೂಪಕ ಅಕುಲ್ ಬಾಲಾಜಿ ಜ್ಯೂ. ಎನ್ಟಿಆರ್ ಅವರಿಗೆ ಮೈಕ್ ಕೊಟ್ಟಿದ್ದಾರೆ. ಆಗ ಜ್ಯೂ. ಎನ್ಟಿಆರ್ ಮತ್ತು ರಿಷಬ್ ಶೆಟ್ಟಿ ನಡುವೆ ಕನ್ನಡದಲ್ಲಿ ಸಂಭಾಷಣೆ ನಡೆಯಿತು. ಇಬ್ಬರು ತಮ್ಮ ತಮ್ಮ ಚಿತ್ರಗಳ ಬಗ್ಗೆ ಪರಸ್ಪರ ಮೆಚ್ಚುಗೆಯ ಮಾತನಾಡಿದ್ದಾರೆ.
ಈ ವೇಳೆ ಜ್ಯೂ. ಎನ್ಟಿಆರ್ ಮಾತನಾಡಿ “ಹೇಗಿದ್ದೀರಾ ಸರ್, ಮತ್ತೊಮ್ಮೆ ಪ್ರಶಸ್ತಿ ಪಡೆದಿದ್ದಕ್ಕೆ ಅಭಿನಂದನೆ. ನಮ್ಮ ಅಮ್ಮನ ಜತೆ ಹೀಗೆ ಕನ್ನಡದಲ್ಲಿ ಮಾತನಾಡುತ್ತೀನಿ” ಎಂದಿದ್ದಾರೆ. ಬಳಿ ರಿಷಬ್ ಶೆಟ್ಟಿ “ಜ್ಯೂ. ಎನ್ಟಿಆರ್ ಸರ್ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಸಾಧ್ಯವಾಗಲಿಲ್ಲ. ಕೊನೆ ಬಾರಿ ಕಿರಿಕ್ ಪಾರ್ಟಿ ತಂಡ ಬಂದಾಗ ನೀವೇ ಪ್ರಶಸ್ತಿ ಕೊಟ್ಟಿದ್ದೀರಿ. ನನ್ನದು ಕುಂದಾಪುರ. ನಿಮ್ಮ ತಾಯಿ ಊರು, ನಮ್ಮೂರು ಎಲ್ಲಾ ಒಂದೇ ಆಗಿರುವುದರಿಂದ ನೀವು ತೆಲುಗಿನವರು ಎನ್ನುವ ಆಲೋಚನೆ ಬರುವುದಿಲ್ಲ” ಎಂದರು.
ಆರ್ ಆರ್ ಆರ್ ಚಿತ್ರದ ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಕೂಡ ಪ್ರಶಸ್ತಿ ಸ್ವೀಕರಿಸಿದರು. ಪ್ರೇಕ್ಷಕರ ನಿರೀಕ್ಷೆಯಂತೆ ಆರ್ಆರ್ಆರ್ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚಿತ್ರರಂಗದಲ್ಲಿ ರಾಷ್ಟ್ರಪ್ರಶಸ್ತಿ, ಫಿಲ್ಮ್ಫೇರ್ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.