ನ್ಯೂಸ್ ನಾಟೌಟ್: ನಾಳೆ (ಸೆಪ್ಟೆಂಬರ್ 17) ಏಷ್ಯಾಕಪ್ ಫೈನಲ್ ಫೈಟ್ ನಡೆಯಲಿದ್ದು, ಭಾರತ ಮತ್ತು ಶ್ರೀಲಂಕಾ ಟ್ರೋಫಿಗಾಗಿ ಕಾದಾಡಲಿದೆ. ಈ ಹಣಾಹಣಿಗೆ ಕೊಲಂಬೊದ ಆರ್ ಪ್ರೇಮದಾಸ್ ಮೈದಾನ ಸಾಕ್ಷಿಯಾಗಲಿದೆ. ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿ ಭಾರತ ಮೊದಲ ಸ್ಥಾನದಲ್ಲಿದೆ.
ಇದರ ಮಧ್ಯೆ ವಿಡಿಯೋವೊಂದು ಹೊರಬಿದ್ದಿದೆ. ಪಾಕಿಸ್ಥಾನದ ಈ ಸೋಲಿನ ಮೂಲಕ ಸೂಪರ್-4 ನಿಂದಲೇ ಪಾಕಿಸ್ತಾನ ಹೊರಗುಳಿಯಿತು. ಫೈನಲ್’ನಲ್ಲಿ ಭಾರತದ ವಿರುದ್ಧ ಕಾದಾಡಿ ಟ್ರೋಫಿ ಗೆಲ್ಲಬೇಕು ಎಂದು ಭಾವಿಸಿದ್ದ ಪಾಕ್’ಗೆ ಆಘಾತವನ್ನುಂಟು ಮಾಡಿತ್ತು. ಇನ್ನು ಈ ಸೋಲಿಗೆ ಪ್ರಮುಖ ಕಾರಣವಾಗಿದ್ದು ಅಂತಿಮ ಹಂತದಲ್ಲಿ ಫೀಲ್ಡಿಂಗ್’ನಲ್ಲಿ ಮಾಡಿದ ಎಡವಟ್ಟುಗಳು.
ಈ ಪಂದ್ಯದಲ್ಲಿ, ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಹೊರತುಪಡಿಸಿ ಇತರೆ ಯಾವೊಬ್ಬ ಬ್ಯಾಟ್ಸ್’ಮನ್’ಗಳು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಬೌಲರ್’ಗಳೂ ಕೂಡ ವಿಫಲರಾದರು. ಕಳಪೆ ಫೀಲ್ಡಿಂಗ್ ಕೂಡ ಪಾಕ್ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಶ್ರೀಲಂಕಾದ ಬ್ಯಾಟಿಂಗ್ ಸಮಯದಲ್ಲಿ, ಪಾಕ್ ಆಟಗಾರರು ಅನೇಕ ಕ್ಯಾಚ್’ಗಳನ್ನು ಕೈಚೆಲ್ಲಿದ್ದರು. ಓವರ್ ಥ್ರೋಗಳಲ್ಲಿ ಕೆಲವು ರನ್ ಕೂಡ ನೀಡಿದ್ದರು. ಈ ಎಲ್ಲಾ ಸನ್ನಿವೇಶಗಳಿಂದ ಕೋಪಗೊಂಡ ನಾಯಕ ಬಾಬರ್ ಅಜಂ ಆಟಗಾರರ ಮೇಲೆ ಕೂಗಾಡಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀಲಂಕಾ ಗೆಲುವಿಗೆ ಕೊನೆಯ ಓವರ್ನಲ್ಲಿ 8 ರನ್ ಬೇಕಾಗಿತ್ತು.
ಈ ಸಂದರ್ಭದಲ್ಲಿ ಬೌಲಿಂಗ್ ಮಾಡಿದ್ದು ಝಮಾನ್ ಖಾನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಸುಲಭವಾಗಿ ರನ್ ತೆಗೆದುಕೊಂಡ ಲಂಕಾ ಜಯ ಸಾಧಿಸಿ, ಫೈನಲ್ ಪ್ರವೇಶಿಸಿತು. ಈ ಸಂದರ್ಭದಲ್ಲಿ ಬೇಸರಗೊಂಡ ಪಾಕ್ ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.