ನ್ಯೂಸ್ ನಾಟೌಟ್ :ಸಂಭ್ರಮದ ಗಣೇಶೋತ್ಸವ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.ಎಲ್ಲೆಡೆ ಗಣೇಶನ ಹಬ್ಬಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರುರವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು.
ಈ ವೇಳೆ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಮಾತನಾಡಿ ” ಗಣೇಶೋತ್ಸವ ಕಾರ್ಯಕ್ರಮವನ್ನು ಆಚರಿಸಲು ಅನುಮತಿ ಪತ್ರದಲ್ಲಿ ಇಲಾಖೆಯಿಂದ ನೀಡಿರುವ ಸೂಚನೆಗಳನ್ನು ಅನುಸರಿಸಿ ಶಾಂತಿಯುತವಾಗಿ ನಡೆಸುವಂತೆ ಹೇಳಿದರು. ಶೋಭಾ ಯಾತ್ರೆಯಲ್ಲಿ ವಾಹನ ದಟ್ಟಣೆ, ಶಬ್ದ ಮಾಲಿನ್ಯ, ಪಟಾಕಿಗಳು ಸಿಡಿಸುವ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಜಾಗೃತಿ ವಹಿಸಿಕೊಳ್ಳಬೇಕೆಂದು ಸೂಚಿಸಿದರು. ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡುವ ಪ್ರದೇಶಗಳಲ್ಲಿ ಹೆಚ್ಚು ಧ್ವನಿವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ಮಾತನಾಡುತ್ತಾ, ಹಬ್ಬದ ಆಚರಣೆಯನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಚರಿಸಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಯಾ ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರ ಜವಾಬ್ದಾರಿಕೆಯಲ್ಲಿ ನಡೆಸಿಕೊಳ್ಳಬೇಕು ಎಂದರು.
ಇದೇ ವೇಳೆ ವೇದಿಕೆಯಲ್ಲಿ ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್ಐ ಸರಸ್ವತಿ ಉಪಸ್ಥಿತರಿದ್ದರು. ಸಭೆಯಲ್ಲಿ ಮುಖಂಡರುಗಳಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಸೋಮಶೇಖರ ಪೈಕ, ಹರಿಪ್ರಸಾದ್ ಎಲಿಮಲೆ, ಚಂದ್ರ ಕೋಲ್ಚಾರ್, ರಜತ್ ಅಡ್ಕಾರ್, ರಾಜೇಶ್ ಶೆಟ್ಟಿ ಮೇನಾಲ, ಸುರೇಶ್ ಕಣಿಮರಡ್ಕ, ಶಿವನಾಥ್ ರಾವ್ ಹಳೆಗೇಟು, ದೇವಿಪ್ರಸಾದ್ ಸುಳ್ಯ, ಯತೀಶ್ ರೈ ದುಗಲಡ್ಕ, ಬಾಲಚಂದ್ರ ಮರ್ಕಂಜ, ಶಿವಪ್ರಸಾದ್ ಕೆ, ವಿಖ್ಯಾತ್ ವಿ.ಮರ್ಕಂಜ, ಸಂದೀಪ್ ಎಂ. ಸೇರಿದಂತೆ ೫೦ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.