ನ್ಯೂಸ್ ನಾಟೌಟ್: ಭಾರಿ ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ಸಣ್ಣ ವಿಮಾನವೊಂದು ಸ್ಕಿಡ್ ಆಗಿ ಪತನಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಶಾಖಪಟ್ಟಣಂನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಕಂಪನಿಯ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 2 ಸಿಬ್ಬಂದಿ ಮತ್ತು 6 ಪ್ರಯಾಣಿಕರು ಸೇರಿದಂತೆ ಒಟ್ಟು ಎಂಟು ಜನರಿದ್ದರು. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳದವರು ಸಕಾಲದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಬೆಂಕಿ ಅನಾಹುತ ತಪ್ಪಿಸಿದ್ದಾರೆ. ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ. ಆದರೆ ಅಪಘಾತದಿಂದಾಗಿ ರನ್ ವೇ ಮುಚ್ಚಿದ್ದರಿಂದ 5 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ವಿಸ್ತಾರಾ ಏರ್ ಲೈನ್ಸ್ ಮಾಹಿತಿ ನೀಡಿದೆ. ವಾರಣಾಸಿ-ಮುಂಬೈ ಮತ್ತು ಬ್ಯಾಂಕಾಕ್-ಮುಂಬೈ ವಿಮಾನಗಳನ್ನು ಹೈದರಾಬಾದ್ಗೆ ತಿರುಗಿಸಲಾಗಿದೆ. ದೆಹಲಿ-ಮುಂಬೈ, ಕೊಚ್ಚಿ-ಮುಂಬೈ ಮತ್ತು ಡೆಹ್ರಾಡೂನ್ ಮುಂಬೈ ವಿಮಾನಗಳನ್ನು ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು ಎಂದು ತಿಳಿದುಬಂದಿದೆ.