ನ್ಯೂಸ್ ನಾಟೌಟ್: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿದ ಪರಿಣಾಮ ಸುಮಾರು 10 ಮಕ್ಕಳು ನದಿ ನೀರಿನಲ್ಲಿ ನಾಪತ್ತೆಯಾದ ಘಟನೆ ಬಿಹಾರದಲ್ಲಿ ಗುರುವಾರ ನಡೆದಿದೆ.
ಬಿಹಾರದ ಮುಜಫ್ಫರಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಈ ಅವಘಡ ನಡೆದಿದ್ದು, ದೋಣಿಯಲ್ಲಿ ಅಂದಾಜು 34 ಮಂದಿ ಇದ್ದರು ಎನ್ನಲಾಗಿದೆ. ಮಾಧುಪುರ ಪಟ್ಟಿ ಘಾಟ್ ಸಮೀಪದ ಬಾಗಮತಿ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕೂಡಲೇ ಸ್ಥಳಕ್ಕೆ ತೆರಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಿರಿಯ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಮಕ್ಕಳ ಕುಟುಂಬಗಳಿಗೆ ಎಲ್ಲಾ ಅಗತ್ಯ ನೆರವು ಹಾಗೂ ಬೆಂಬಲ ನೀಡಲಾಗುತ್ತದೆ ಎಂದು ತಿಳಿಸಿದರು. ಇದುವರೆಗೂ 20 ಮಕ್ಕಳನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ದೋಣಿ ದುರಂತದ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು ಸ್ಥಳಕ್ಕೆ ತೆರಳಿ, ರಕ್ಷಣಾ ಕಾರ್ಯ ಆರಂಭಿಸಿವೆ. ದೋಣಿಯಲ್ಲಿ ನಿಖರವಾಗಿ ಎಷ್ಟು ಮಂದಿ ಇದ್ದರು ಎನ್ನುವುದು ಸ್ಪಷ್ಟವಾಗಿಲ್ಲ. ಬೆಳಿಗ್ಗೆಯಿಂದ ರಕ್ಷಣಾ ಕಾರ್ಯ ನಡೆದಿದ್ದು, ಇನ್ನೂ ಅನೇಕರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ದುರಂತ ಅಂತ್ಯ ಕಂಡ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪತ್ತೆ ಮತ್ತು ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಕೂಡ ಕೈ ಜೋಡಿಸಿದ್ದಾದ್ದು, ದೋಣಿಯಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು ಎಂದು ಮಾಹಿತಿ ದೊರಕಿದೆ.
ಆದರೆ ಇದರ ಬಗ್ಗೆ ಅಧಿಕೃತ ಖಚಿತತೆ ದೊರಕಿಲ್ಲ. ದೋಣಿಯಲ್ಲಿ ಮಿತಿಮೀರಿ ಜನರನ್ನು ತುಂಬಿಸಲಾಗಿದ್ದು, ನದಿಯ ಸೆಳೆತ ಬಹಳ ಪ್ರಬಲವಾಗಿತ್ತು, ಹೀಗಾಗಿ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.
9 ಮತ್ತು 10ನೇ ತರಗತಿಯ ಮಕ್ಕಳು ದೋಣಿಯಲ್ಲಿ ಇದ್ದರು. ನದಿ ದಾಟಲು ಬೇರೆ ಯಾವುದೇ ಮಾರ್ಗ ಇಲ್ಲದ ಕಾರಣ ದೋಣಿಯನ್ನೇ ಅವಲಂಬಿಸಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.