ನ್ಯೂಸ್ ನಾಟೌಟ್ : ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ನಡೆಸಲು ತಯಾರಿ ನಡೆಯುತ್ತಿದೆ. ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.ಇಂತಹ ಕ್ರೀಡೆಯನ್ನ ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ನಡೆಸುತ್ತಾರೆ. ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ಧತೆ ಭರದಿಂದ ನಡೆಯುತ್ತಿದೆ.
ಕರಾವಳಿ ಭಾಗದ ಸಾಂಪ್ರದಾಯಿಕ ಆಟ ಕಂಬಳ(Kambala) ಈ ವರ್ಷ ಮೊಟ್ಟ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿದೆ ಅನ್ನೋದು ವಿಶೆಷ..!ಬೆಂಗಳೂರಿನಲ್ಲಿ ನವೆಂಬರ್ 24, 25, 26ಕ್ಕೆ ಒಟ್ಟು ಮೂರು ದಿನಗಳ ಕಾಲ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಇದೀಗ ಅದ್ದೂರಿ ಬೆಂಗಳೂರಿನ ಕಂಬಳಕ್ಕೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಬರಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟ ಮೊದಲು ಬಾರಿಗೆ ರಾಜಧಾನಿಯಲ್ಲಿ ಕಂಬಳವನ್ನ ಮಾಡಲು ತುಳುಕೂಟ ನಿರ್ಧರಿಸಿದೆ. ಸದ್ಯ ಈ ಕಂಬಳವನ್ನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮಾಡಲು ಜಾಗ ಗುರುತಿಸಿದ್ದು, ಈಗಾಗಲೇ ಮೈಸೂರ್ ಒಡೆಯರ್ ಜೊತೆಗೂ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇನ್ನು ನವೆಂಬರ್ ತಿಂಗಳ 24, 25, 26 ನೇ ತಾರೀಖಿನಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದು, ಕಂಬಳಕ್ಕೆ 150 ಜೋಡಿಯ ಕೋಣಗಳು ಬರಲಿವೆಯಂತೆ. ಇನ್ನು ಈ ಮೂರು ದಿನಗಳ ಕಾಲ ಈ ಕಂಬಳ ನಡೆಯಲಿದ್ದು, ಅಂದಾಜು 5 ಲಕ್ಷಕ್ಕು ಅಧಿಕ ಜನರು ಬರುವ ಸಾಧ್ಯತೆ ಇದೆ.ಹೀಗಾಗಿ ಇದಕ್ಕೆ ತುಳುನಾಡಿನ ಬೆಡಗಿ ಅನುಷ್ಕಾ ಶೆಟ್ಟಿ ಆಗಮಿಸುವ ಎಲ್ಲಾ ನಿರೀಕ್ಷೆಗಳು ಇವೆ.
ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಅನುಷ್ಕಾ ಶೆಟ್ಟಿ, ಸೇರಿದಂತೆ ಹಲವರು ಬರುವ ಸಾಧ್ಯತೆ ಇದ್ದು, ಕಂಬಳಕ್ಕೆ ಬರುವ ಕೋಣಗಳನ್ನ ವಾಹನಗಳಲ್ಲಿ ತರಿಸುವ ವ್ಯವಸ್ಥೆ ಬಗ್ಗೆ ಚರ್ಚೆಗಳು ನಡಿತಿವೆ. ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳಿಗೆ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿವೆ.
ಬೆಂಗಳೂರಿಗೆ ಒಂದು ದಿನದ ಮುಂಚಿತವಾಗಿ ಕೊಣಗಳು ಬರಲಿದ್ದು, ಒಂದು ಇತಿಹಾಸವೇ ಸೃಷ್ಟಿಯಾಗಲಿದೆ. ಇನ್ನು ಕಂಬಳಕ್ಕೆ ಬೇಕಾದ ಕೆಸರು ಗದ್ದೆಯನ್ನ ರೆಡಿಮಾಡಲು ಮಣ್ಣಿನ ಟೆಸ್ಟಿಂಗ್ ಹಾಗೂ ನೀರಿನ ಟೆಸ್ಟಿಂಗ್ ಕಂಪ್ಲೀಟ್ ಆಗಿದ್ದು, ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಈ ಆಕರ್ಷಕ ಕಂಬಳವು ಇಷ್ಟು ದಿನ ಕರಾವಳಿ ಭಾಗದಲ್ಲಿ ನಡೆಯುತ್ತಿತ್ತು. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಆ ದಿನವನ್ನ ಕಣ್ತುಂಬಿಕೊಳ್ಳಲು ತುಳುನಾಡಿನ ಜನತೆ ಸೇರಿದಂತೆ ಇಡೀ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದಾರೆ.