ನ್ಯೂಸ್ ನಾಟೌಟ್: ಕೇರಳದಲ್ಲಿ ನಿಫಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟ ಘಟನೆ ಬಳಿಕ ಗಡಿಭಾಗದ ಜಿಲ್ಲೆಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೇರಳದ ಗಡಿಭಾಗದಲ್ಲಿರುವ ಆಸ್ಪತ್ರೆಗಳು ಅಲರ್ಟ್ ಆಗಿ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ. ನಿಫಾ ವೈರಸ್ ಸೋಂಕು ಬಾವಲಿಯಿಂದ ಹರಡುವುದರಿಂದ ಯಾವುದೇ ಹಣ್ಣುಗಳನ್ನು ತಿನ್ನುವಾಗ ಜಾಗ್ರತೆ ವಹಿಸಬೇಕು.
ಪ್ರಾಣಿಗಳು ತಿಂದ ಯಾವುದೇ ಹಣ್ಣುಗಳನ್ನು ಜನರು ತಿನ್ನಬಾರದು. ಜ್ವರದ ಲಕ್ಷಣ ಕಂಡುಬಂದಲ್ಲಿ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುದರ್ಶನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಯಾವುದೇ ನಿಫಾ ವೈರಸ್ ಪ್ರಕರಣ ಕಂಡುಬಂದಿಲ್ಲ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಸುಲಭದಲ್ಲಿ ಹರಡುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ. ಆದ್ದರಿಂದ ಕೊನೆಯ ಸಂದರ್ಭದಲ್ಲಿ ಸೋಂಕು ಪತ್ತೆಯಾದರೆ ಮರಣ ಸಾಧ್ಯತೆ ಹೆಚ್ಚು . ಹಾಗೆಂದು ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ವೈರಸ್ ನಿಫಾ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಸೋಂಕು ಇರುವ ಪ್ರಾಣಿಗಳ ಮಲ, ಮೂತ್ರ, ಎಂಜಲಿನಿಂದ ನಿಫಾ ವೈರಸ್ ಹರಡುತ್ತದೆ . ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ನಿಫಾ ವೈರಾಣುಗಳು ಬಾವಲಿಯಿಂದ ಹರಡುವ ವೈರಸ್ ಆಗಿವೆ. ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಲ್ಲದೇ ಪ್ರಾಣಿ ಅಥವಾ ಪಕ್ಷಿಗಳಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ.