ನ್ಯೂಸ್ ನಾಟೌಟ್: ಭಾರೀ ಗಾತ್ರದ ಮರವೊಂದು ದಿಢೀರನೆ ಧರೆಗುರುಳಿ ಪ್ರವಾಸಿಗರು ಸ್ಪಲ್ಪದರಲ್ಲೇ ಪಾರದ ಘಟನೆ ಮಡಿಕೇರಿಯ ಪ್ರವಾಸಿ ತಾಣ ಅಬ್ಬಿಫಾಲ್ಸ್ ನಲ್ಲಿ ಮಂಗಳವಾರ ನಡೆದಿದೆ.
ಮುಖ್ಯರಸ್ತೆಯಿಂದ ಜಲಪಾತದ ಕಡೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಭಾರೀ ಗಾತ್ರದ ಒಣಮರವೊಂದು ಮುರಿದು ಬಿದ್ದಿದ್ದು, ಕೂದಲೆಳೆ ಅಂತರದಿಂದ ಪ್ರವಾಸಿಗರು ಪಾರಾಗಿದ್ದಾರೆ ಎನ್ನಲಾಗಿದೆ.
ಮಂಗಳವಾರ(ಸೆ.೧೩) ಬೆಳಗ್ಗಿನಿಂದಲೇ ಜಲಧಾರೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಈ ವೇಳೆ ಕಾಫಿ ತೋಟದಲ್ಲಿದ್ದ ಒಣ ಮರವೊಂದು ಏಕಾಏಕಿ ಮುರಿದು ರಸ್ತೆಗಟ್ಟಲಾಗಿ ಬಿದ್ದಿದೆ.
ಮರ ಬಿದ್ದ ಸ್ಥಳದಿಂದ ಕೆಲವರು ಆಗಷ್ಟೇ ಮುಂದೆ ಸಾಗಿದ್ದರು, ಇನ್ನೂ ಕೆಲವರು ಆ ಕಡೆಯೇ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದರು. ಮರ ಮಾರ್ಗಕ್ಕೆ ಅಡ್ಡಲಾಗಿ ಬೇಲಿಯ ಮೇಲೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.