ನ್ಯೂಸ್ ನಾಟೌಟ್: ಗಣೇಶನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿವೆ. ಎಲ್ಲಾ ಕಡೆಗಳಲ್ಲಿ ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿವೆ. ಈ ನಡುವೆ ಪರಿಸರಕ್ಕೆ ಪೂರಕವಾಗಿ ಹಬ್ಬಗಳನ್ನು ಆಚರಿಸುವಂತೆ ಸರ್ಕಾರ ಕರೆ ನೀಡಿದೆ. ಅಲ್ಲದೇ ಪ್ರಕೃತಿಗೆ ಹಾನಿಯಾಗುವ ಯಾವುದೇ ರಾಸಾಯನಿಕಗಳನ್ನು ಬಳಸಿ ಗಣೇಶನ ವಿಗ್ರಹ ತಯಾರಿಸಬಾರದು. ಪಿಒಪಿ ಗಣಪತಿ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಲೇಪಿಸಿದ ಗಣಪತಿ ವಿಗ್ರಹಗಳ ತಯಾರಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಅಧಿಕಾರಿಗಳೊಂದಿಗೆ ತಮ್ಮ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದ ಸಚಿವರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ಗೂ ಹೆದರದೆ, ಕಾನೂನುಬಾಹಿರವಾಗಿ ಪಿಒಪಿ ಗಣಪತಿ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದದ್ದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ಮೇ 12ರಂದು ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಗಸ್ಟ್ 21ರಂದು ಸುತ್ತೋಲೆ ಹೊರಡಿಸಿದೆ’ ನೀರಿನಲ್ಲಿ ಕರಗದ ಪಿಒಪಿ ವಿಗ್ರಹಗಳು ಜಲಮೂಲಗಳಿಗೆ ಅಪಾಯಕಾರಿಯಾಗಿದ್ದು, ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಬೇಕು. ಇಂತಹ ಗಣೇಶ ವಿಗ್ರಹಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ಮಾಡುವುದರ ವಿರುದ್ಧ ಜಲ, ವಾಯು ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಗಳಿಗೂ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪ್ರಕೃತಿ, ಜಲಚರಗಳ ಸಾವಿಗೆ ಕಾರಣವಾಗುವ ಬಣ್ಣ ಲೇಪಿತ ಗಣೇಶಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಗಣಪತಿ ಪೂಜಿಸಲು ಇತರರಿಗೂ ಪ್ರೇರೇಪಿಸುವಂತೆ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ‘ಗಣಪತಿ ಪರಿಸರದಿಂದ ಉದ್ಭವಿಸಿದ ದೇವರು, ನಾವು ಪರಿಸರ ಸ್ನೇಹಿ ಗಣಪನ ಪೂಜಿಸಿದರೆ ಅದು ನಿಜ ಭಕ್ತಿಯ ಸಮರ್ಪಣೆ ಆಗುತ್ತದೆ ಎಂದರು.