ನ್ಯೂಸ್ ನಾಟೌಟ್: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಬೇಕು. ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ವೈದ್ಯರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಗೌಡ ಡಿಬಿ ಒತ್ತಾಯಿಸಿದರು.
ಕಳೆದ 11 ವರ್ಷಗಳ ಹಿಂದೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು, ಕ್ಲಾಕ್ ಟವರ್ ಸಮೀಪ ಆಯೋಜಿಸಿದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಒಂದು ವಾರ ನಿರಂತರ ಧರಣಿ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದೇವು. ಆದರೆ ಕೇವಲ ಎರಡು ದಿನಧರಣಿ ನಡೆಸಲು ಅನುಮತಿ ಸಿಕ್ಕಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಗೌಡ ಡಿಬಿ ತಿಳಿಸಿದರು. ಜಿಲ್ಲೆಯ ಆರು ತಾಲೂಕುಗಳ ಒಕ್ಕಲಿಗರ ಯಾನೆ ಗೌಡರ ಸಂಘಟನೆಯ ಧುರೀಣರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ದಿನ ಜಿಲ್ಲೆಯ ಮೂರು ತಾಲೂಕುಗಳ ಸಂಘಟನೆಗಳ ಧುರೀಣರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು ಎಂದು ಅವರು ಆಗ್ರಹಿಸಿದರು.
ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ವಿಚಾರಣೆ ನಡೆದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಅಂದು ಆಪಾದಿತ ಸ್ಥಾನದಲ್ಲಿದ್ದ ವ್ಯಕ್ತಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಆದರೆ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿದ ಮತ್ತು ಆಕೆಯನ್ನು ಕೊಲೆಗೈದ ನೈಜ ಅಪರಾಧಿಗಳು ಯಾರು ಮತ್ತು ಇದಕ್ಕೆ ನೆರವು ನೀಡಿದವರು ಯಾರು ಎಂಬ ವಿಚಾರ ತನಿಖೆಯಿಂದ ಹೊರ ಬಂದಿಲ್ಲ ಎಂದು ಮಂಗಳೂರು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ. ಪ್ರಶ್ನಿಸಿದರು.
ಸೌಜನ್ಯಾ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಮರು ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಪ್ರಕರಣದ ತನಿಖಾಧಿಕಾರಿ ಮತ್ತು ವೈದ್ಯರನ್ನು ತನಿಖೆಗೆ ಒಳಪಡಿಸಬೇಕು. ಸರ್ಕಾರ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ವಿವಿಧ ತಾಲೂಕುಗಳ ಮುಖಂಡರಾದ ಕುಶಾಲಪ್ಪ ಗೌಡ ಪೂವಾಜೆ, ಪದ್ಮನಾಭ ಗೌಡ ಬೆಳ್ತಂಗಡಿ, ಚಂದ್ರ ಕೊಳ್ಚಾರ್ ಸುಳ್ಯ, ಸುರೇಶ್ ಬೈಲ್ ಕಡಬ, ಮೋನಪ್ಪ ಗೌಡ ವಿಟ್ಲ , ಧರ್ಮಾವತಿ ಗೌಡ, ಕಿರಣ್ ಬುಡ್ಲೆಗುತ್ತು ರಕ್ಷಿತ್, ನಾಗೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.