ನ್ಯೂಸ್ ನಾಟೌಟ್ : ರೊಚ್ಚಿಗೆದ್ದ ಶಾಲಾ ವಿದ್ಯಾರ್ಥಿನಿಯರು ಬಿಇಒ ಕಾರಿಗೆ ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದು ಧ್ವಂಸಗೊಳಿಸಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶಿಕ್ಷಣ ಅಧಿಕಾರಿಯ ಕಾರನ್ನು ಸುತ್ತುವರೆದಿರುವ ವಿದ್ಯಾರ್ಥಿನಿಯರು ಅದರ ಮೇಲೆ ಕಲ್ಲನ್ನು ಎಸೆಯುವ ದೃಶ್ಯ ಸೆರೆಯಾಗಿದೆ.
ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಸರಿಯಾದ ಆಸನ ವ್ಯವಸ್ಥೆ ಇಲ್ಲದ್ದಕ್ಕೆ ಬಿಹಾರದ ವೈಶಾಲಿ ಜಿಲ್ಲೆಯ ಮಹನಾರ್ ನಲ್ಲಿರುವ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ.
ಮೂಲ ಸೌಕರ್ಯ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬ್ಲಾಕ್ ಶಿಕ್ಷಣಾಧಿಕಾರಿ ಅಹಲ್ಯಾ ಕುಮಾರ್ ಕಾರನ್ನು ವಿದ್ಯಾರ್ಥಿನಿಯರು ಧ್ವಂಸಗೊಳಿಸಿದ್ದಾರೆ. ತರಗತಿಗಳಲ್ಲಿ ಕೂರಲು ಯಾವುದೇ ಬೆಂಚು ಅಥವಾ ಟೇಬಲ್ ಗಳಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿಭಟನೆ ತಡೆಯಲು ಬಂದ ಮಹಿಳಾ ಪೊಲೀಸರು ಕೆಲವು ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಕೆರಳಿದ ಪ್ರತಿಭಟನಾಕಾರರು ಶಿಕ್ಷಣಾಧಿಕಾರಿ ಕಾರನ್ನು ಧ್ವಂಸಗೊಳಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಹನಾರ್ನ ಎಸ್ಡಿಒ ನೀರಜ್ ಕುಮಾರ್, ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವೇಶದಿಂದಾಗಿ ಮೂಲಸೌಕರ್ಯ ಕೊರತೆ ಉಂಟಾಗಿದೆ. ಒಳಗೆ ಕುಳಿತುಕೊಳ್ಳಲು ಸ್ಥಳ ಸಿಗದ ವಿದ್ಯಾರ್ಥಿಗಳು ಹೊರಗೆ ಬಂದು ರಸ್ತೆ ತಡೆ ನಡೆಸಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.