ನ್ಯೂಸ್ ನಾಟೌಟ್ : ಬಿಜೆಪಿಯವರು ನಮ್ಮ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಜಾರಿಯಾಗಿಲ್ಲ ಎಂಬಂತೆ ಬಿಂಬಿಸಲು ಬಣ್ಣ ಹಚ್ಚಿ ಟೀಕೆಯನ್ನು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ನಗರ ಪಂಚಾಯತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ ನಿನ್ನೆ ನಡೆದ ಬಿಜೆಪಿ ಪ್ರತಿಭಟನೆಯನ್ನು ಟೀಕಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಯವರು ನಮ್ಮ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಟೀಕೆ ಮಾಡುತ್ತಿದ್ದಾರೆ. ಟೀಕೆ ಪ್ರಜಾಪ್ರಭುತ್ವದಲ್ಲಿ ಸ್ವಾಗತಾರ್ಹ ಆದರೆ ಸುಳ್ಯ ಶಾಸಕರು ಪಂಚ ಗ್ಯಾರಂಟಿ ಯೋಜನೆಗಳನ್ನು ಒಬ್ಬ ಮಹಿಳೆಯಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಮಾಡಿದ ,ಬಿಜೆಪಿಯವರು ಕನಸುಮನಸಿನಲ್ಲೂ ಮಾಡಲು ಅಸಾಧ್ಯವಾದ, ಅದ್ಬುತ ಯೊಜನೆಗಳನ್ನು ಬಿಟ್ಟಿಭಾಗ್ಯ ಎಂದು ಟೀಕೆ ಮಾಡುವುದು ಖಂಡನೆ ಮಾಡಿದ್ದಾರೆ.
ಈ ಗ್ಯಾರಂಟಿ ಯೋಜನೆಗಳನ್ನು ಶಾಸಕಿ ಮತ್ತು ಬಿಜೆಪಿ ನಾಯಕರನ್ನೊಳಗೊಡಂತೆ ಯಾರೂ ಕೂಡಾ ಪಡೆದುಕೊಂಡಿಲ್ಲದಿದ್ದರೆ ಸಾರ್ವಜನಿಕವಾಗಿ ಹೇಳಿಕೆ ಕೊಡಲಿ. ಅದು ಬಿಟ್ಟು ಎಲ್ಲಾ ಯೋಜನೆಗಳನ್ನು ಅನುಭವಿಸಿಕೊಂಡು ಈ ರೀತಿ ಟೀಕೆ ಮಾಡುತ್ತಿರುವುದು ಇವರ ಎಡಬಿಡಂಗಿತನವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ನಾನು ಬಿಜೆಪಿಯ ಪುರುಷ ನಾಯಕರಲ್ಲಿ ಪ್ರಶ್ನೆ ಮಾಡುತ್ತೇನೆ ನಮ್ಮ ಶಕ್ತಿ ಯೋಜನೆ ಸಮರ್ಪಕವಾಗಿ ಆಗಿದೆಯೇ ಇಲ್ಲವೇ ಎಂದು ತೀರ್ಮಾನಿಸಲು ನೀವು ಆಶಕ್ತರಾಗಿದ್ದೀರಿ. ಕಾರಣ ಅದರಲ್ಲಿ ಓಡಾಡುವವರು ನಿಮ್ಮ ಮನೆಯ ತಾಯಂದಿರು, ಹೆಣ್ಣು ಮಕ್ಕಳು, ಹಾಗು ನಿಮ್ಮ ಪತ್ನಿಯರೇ.. ಹಾಗೆಯೇ ಗೃಹಲಕ್ಷ್ಮಿಯ ಪಲಾನುಭವಿಗಳು ಸಹ ನಿಮ್ಮ ಮನೆಯ ತಾಯಂದಿರೇ, ನಿಮ್ಮ ಹೆಣ್ಣು ಮಕ್ಕಳೇ, ನಿಮ್ಮ ಮನೆಯ ಗೃಹಲಕ್ಷ್ಮಿಯರೇ…
ಅನ್ನಭಾಗ್ಯವನ್ನು ಪಡೆಯುವಂತಹ ಪಲಾನುಭವಿಗಳು ಇವತ್ತು ಭಾಷಣ ಮಾಡುವಂತ ನಿಮ್ಮಂತ ಶ್ರೀಮಂತರಲ್ಲ. ಅವರು ಕಡು ಬಡವರು. ಆ ಕಾರಣಕ್ಕಾಗಿ ಇವರು ನಮ್ಮ ಗ್ಯಾರಂಟಿ ಯೋಜನೆಗಳು ಕಾರ್ಯಗತ ವಾಗಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಹಾಗಾಗಿ ನಾನು ಅರ್ಥೈಸಿಕೊಂಡಂತೆ ವಾಸ್ತವವಾಗಿ ಆಗಿದೆಯೋ ಇಲ್ಲವೋ ಎಂದು ಅವರವರ ಮನೆಯ ಮಾತೆಯರಲ್ಲಿ, ಗೃಹಲಕ್ಷ್ಮಿಯವರಲ್ಲಿ ಕೇಳಿ ತಿಳಿದುಕೊಳ್ಳಲಿ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.