ನ್ಯೂಸ್ ನಾಟೌಟ್ : ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ, ಜೆಡಿಎಸ್ ಒಂದಾಗಿವೆ. ಎರಡೂ ಪಕ್ಷಗಳ ನಡುವಿನ ಮೈತ್ರಿಮಾತುಕತೆ ಬಹುತೇಕ ಫಲದಾಯಕವಾಗಿದೆ.
ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್ ಅನ್ನು ಕಮಲ ದಳವೆಂದು ವೆಂಗ್ಯವಾಡಿದೆ. ಈ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದ ಪ್ರತಾಪ್ಸಿಂಹ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮಂಡಿಯೂರಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಹಿಂದಿನ ರಾಜಕೀಯ ಲೆಕ್ಕಾಚಾರ ಏನಿರಬಹುದು ಅನ್ನುವುದರ ಕುರಿತ ಚರ್ಚೆ ಕೂಡ ಜಾಲತಾಣದಲ್ಲಿ ನಡೆಯುತ್ತಿದೆ.
ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡರನ್ನು ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಚರ್ಚೆ ಮಾಡಿದ್ದಾರೆ. ಈಗ ಇಬ್ಬರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಮೈತ್ರಿಯ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಂಸದ ಪ್ರತಾಪ ಸಿಂಹ, ಜೆಡಿಎಸ್ ವರಿಷ್ಟರ ಭೇಟಿ ಮಾಡಿ ಆಶೀರ್ವಾದ ಪಡೆದು ಮಾತುಕತೆ ಮಾಡಿದ್ದಾರೆ. ಈ ವೇಳೆ ಪ್ರತಾಪ ಸಿಂಹ ಮಾಜಿ ಪ್ರಧಾನಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿದ್ದಾರೆ. ಈ ಘಟನೆಯು ಆದಿ ಚುಂಚನಗಿರಿ ನೂತನ ಶಾಖಾ ಮಠದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಘಟನೆಯಾಗಿದೆ ಎಂದು ಹೇಳಲಾಗಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಅತಿ ಹೆಚ್ಚು ಪ್ರಭಾಲ್ಯ ಹೊಂದಿದ್ದಾರೆ. ಈಗಿಲಿಂದಲೇ ಜೆಡಿಎಸ್ ಮತಬ್ಯಾಂಕ್ ಗೆ ಸಂಸದ ಪ್ರತಾಪ ಸಿಂಹ ಕೈ ಹಾಕಿದ್ದಾರೆ. ಮೈಸೂರು ಭಾಗದ ಜೆಡಿಎಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪ್ರತಾಪ ಸಿಂಹ, ಎರಡು ಭಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹ್ಯಾಟ್ರಿಕ್ ಗೆಲುವಿಗೆ ಚುನಾವಣಾ ರಣತಂತ್ರ ಹೆಣೆಯುತ್ತಿರುವ ಸಂಸದನಿಗೆ ಈಗ ದೊಡ್ಡ ಗೌಡರ ಆಶೀರ್ವಾದ ಸಿಕ್ಕಿದೆಯೇ ಎಂಬುದು ಕುತೂಹಲಕಾರಿಯಾಗಿದೆ.
ಆದಿ ಚುಂಚನಗಿರಿ ಶಾಖಾ ಮಠದ ಉದ್ಘಾಟನೆಗೆ ತೆರಳಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಜಿ.ಟಿ ದೇವೇಗೌಡರನ್ನ ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ ಮಾತುಕತೆ ಮಾಡಿದ್ದಾರೆ. ಮೈತ್ರಿ ಅನುಸಾರ ಜೆಡಿಎಸ್ ಪಕ್ಷದಿಂದ ಮೈಸೂರಿನಲ್ಲಿ ಬಿಜೆಪಿಗೆ ಬೆಂಬಲ ನೀಡಲಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡರೆ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವುದು ಪ್ರತಾಪ್ ಸಿಂಹ ಲೆಕ್ಕಾಚಾರವೂ ಆಗಿರಬಹುದು. ದೇವೇಗೌಡರ ಕಾಲಿಗೆ ಬಿದ್ದು ನಮಸ್ಕರಿಸಿದ ಒಂದು ಫೋಟೊ ಹಲವು ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಮಾಹಿತಿ ಬಿಚ್ಚಿಡುತ್ತಿದೆ.