ನ್ಯೂಸ್ ನಾಟೌಟ್: ಇನ್ನೇನು ಮದುವೆಯ ಸೀಸನ್ ಶುರುವಾಗುತ್ತಿದೆ. ಎಲ್ಲರೂ ಮದುವೆ ತಯಾರಿಗಳಲ್ಲಿ ಬ್ಯುಸಿಯಾಗಿರುತ್ತಾರೆ. ನವದಂಪತಿಗಳಂತೂ ಹನಿಮೂನ್ ಗೆ ಎಲ್ಲಿ ಹೋಗುವುದು ಎಂದು ಯೋಚಿಸುತ್ತಿರುತ್ತಾರೆ.
ಕೆಲವರಲ್ಲಿ ಮದುವೆ ಮುಗಿಸುವುದರಲ್ಲೇ ಸಾಕಾಗಿರುತ್ತದೆ. ಇನ್ನು ವಿದೇಶಕ್ಕೆ ಹನಿಮೂನ್ ಗೆ ಹೋಗುವುದು ಕನಸಿನ ಮಾತೇ ಆಗಿರುತ್ತದೆ. ಅಂತಹವರು ನಮ್ಮ ದೇಶದೊಳಗೆಯೇ ಉತ್ತಮ ಸ್ಥಳಗಳನ್ನು ಹನಿಮೂನ್ ಗಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಂತಹ ಭಾರತದ 11 ಸ್ಥಳಗಳ ವಿವರನ್ನು ನಾವು ಇಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ.
ಅಂಡಮಾನ್ -ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಇಲ್ಲಿ ನಿಮಗೆ ವಿದೇಶಿ ನೆಲದ ಅನುಭವ ಸಿಗುತ್ತದೆ. ಅಷ್ಟೊಂದು ಉತ್ತಮ ಸ್ಥಳ ಇದಾಗಿದ್ದು ಇಲ್ಲಿಗೆ ಬೆಂಗಳೂರು, ಕೋಲ್ಕತ್ತ, ದೆಹಲಿಯಿಂದ ನೇರ ವಿಮಾನ ಸಂಪರ್ಕವಿದೆ. ಅಕ್ಟೋಬರ್ ನಿಂದ ಆರಂಭವಾಗಿ ಫೆಬ್ರವರಿ ತನಕ ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಐಷಾರಾಮಿ ರೆಸ್ಟಾರ್ಟ್ ನಿಂದ ಹಿಡಿದು ಮಧ್ಯಮ ವರ್ಗದ ಜನರ ಕೈಗೆಟುಕುವ ದರದಲ್ಲಿ ರೆಸಾರ್ಟ್ ಗಳಿವೆ. ಒಟ್ಟಾರೆಯಾಗಿ ಇಲ್ಲಿಗೆ ಹೋದರೆ ೩೦೦ ದ್ವೀಪಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡಬಹುದು.
ಜಮ್ಮು-ಕಾಶ್ಮೀರದಲ್ಲಿನ ಶ್ರೀನಗರವನ್ನು ಭೂಲೋಕದ ಸ್ವರ್ಗ ಎಂದೇ ಕರೆಯುತ್ತಾರೆ. ಎತ್ತ ನೋಡಿದರತ್ತ ಕಣಿವೆ ಪ್ರದೇಶಗಳು, ಮೈದುಂಬಿ ಹರಿಯುವ ಸರೋವರಗಳು, ಹಿಮದಿಂದ ಆವೃತ್ತವಾಗಿರುವ ಎತ್ತದ ಪ್ರದೇಶಗಳಲ್ಲಿ ಕಣ್ಮನ ಸೆಳೆಯುತ್ತದೆ. ಉಳಿದುಕೊಳ್ಳುವುದಕ್ಕೆ ಬೋಟಿಂಗ್ ಹೌಸ್ ಗಳಿದ್ದು ನೀವು ಅಲ್ಲೇ ಉಳಿದುಕೊಳ್ಳಬಹುದು. ಏಪ್ರಿಲ್ ನಿಂದ ಅಕ್ಟೋಬರ್ ತನಕ ಇಲ್ಲಿಗೆ ಭೇಟಿ ನೀಡುವುದಕ್ಕೆ ಸೂಕ್ತ ಸಮಯ.
ಹೆಚ್ಚಿನವರಿಗೆ ಗೋವಾ ಚಿರಪರಿಚಿತ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಆಗಮಿಸುತ್ತಾರೆ. ಮದುವೆಯಾದ ಹೊಸ ಜೋಡಿ ಗೋವಾದಲ್ಲಿ ಕಾಲ ಕಳೆಯುವುದಕ್ಕೆ ಉತ್ತಮ ಜಾಗ. ರೈಲು, ಬಸ್ಸಿನಲ್ಲೂ ಗೋವಾಕ್ಕೆ ಪ್ರಯಾಣಿಸಬಹುದು
ನಿಮ್ಮ ಹನಿಮೂನ್ ಗೆ ರಾಯಲ್ ಸ್ಪರ್ಶ ನೀಡಬೇಕೆಂದರೆ ನೀವು ರಾಜಸ್ಥಾನದ ಜೈಸಲ್ಮೇರ್ಗೆ ಹೋಗಬೇಕು. ಇಲ್ಲಿ ಅರಮನೆಗಳು, ಕೋಟೆಗಳನ್ನು ಕಣ್ತುಂಬಿಸಿಕೊಳ್ಳಬಹುದು. ಆನೆ ಮತ್ತು ಒಂಟೆ ಸವಾರಿ ಮಾಡಬಹುದು. ಥಾರ್ ಮರುಭೂಮಿ ವೀಕ್ಷಣೆ ಮಾಡಬಹುದು. ಸಾಂಸ್ಕೃತಿಕ ಸ್ಥಳ ಎಂದು ಕರೆಸಿಕೊಳ್ಳುತ್ತಿರುವ ಅಲ್ಲಿ ರಾಜಸ್ಥಾನಿ ಜಾನಪದ ನೃತ್ಯಗಾರರು ಮತ್ತು ಸಂಗೀತಗಾರರು ಪ್ರದರ್ಶನ ನೀಡುತ್ತಾರೆ. ಇದಕ್ಕೆ ಜೋಧ್ಪುರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ನಿಂದ ಮಾರ್ಚ್ವರೆಗೆ ಸೂಕ್ತ ಸಮಯವಾಗಿದೆ.
ಕರ್ನಾಟಕದ ಜನರು ಬೇರೆಲ್ಲೂ ಹೋಗುವ ಅಗತ್ಯ ಇಲ್ಲ. ಕೊಡಗು ಜಿಲ್ಲೆಯ ಮಡಿಕೇರಿ ಅಂದರೆ ದಕ್ಷಿಣದ ಕಾಶ್ಮೀರ ಎಂದೇ ಕರೆಯುತ್ತಾರೆ. ಇಲ್ಲಿನ ಕಾಫಿ ಎಸ್ಟೇಟ್ ಗಳಲ್ಲಿ ಅತ್ಯುತ್ತಮ ಹೋಂ ಸ್ಟೇ ವ್ಯವಸ್ಥೆಗಳಿವೆ. ಜೊತೆಗೆ ಸುತ್ತಲಿನ ಹಸಿರು, ತಂಪಾದ ಗಾಳಿ ನಿಮ್ಮನ್ನು ಬೇರೆಯದ್ದೇ ಒಂದು ಜಗತ್ತಿಗೆ ಕರೆದುಕೊಂಡು ಹೋಗುತ್ತದೆ.
ಉತ್ತರಾಖಂಡದಲ್ಲಿರುವ ಅದ್ಭುತ ಸ್ಥಳಗಳಲ್ಲಿ ನೈನಿತಾಲ್ ಕೂಡ ಒಂದು. ಗಿರಿಧಾಮಗಳಿರುವ ಇದು ನವದಂಪತಿಯ ಹನಿಮೂನ್ ಗೆ ಸೂಕ್ತ ಸ್ಥಳ. ಭವ್ಯವಾದ ಪರ್ವತಗಳು ಮತ್ತು ಪ್ರಾಚೀನ ದೇವಾಲಯಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಸರೋವರಗಳಲ್ಲಿ ದೋಣಿ ವಿಹಾರವನ್ನೂ ಮಾಡಬಹುದು. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ನಿಂದ ಏಪ್ರಿಲ್ವರೆಗೆ ಸೂಕ್ತ ಸಮಯ
ಹಿಮಾವೃತವಾದ ಶಿಮ್ಲಾ ಹನಿಮೂನ್ ಗೆ ಸೂಕ್ತವಾದ ಸ್ಥಳಗಳಲ್ಲಿ ಒಂದು. ಇಲ್ಲಿನ ಗಿರಿಧಾಮಗಳೆಲ್ಲವು ಹಿಮಾವೃತವಾಗಿರುತ್ತವೆ. ಇಲ್ಲಿ ಐಸ್ ಟ್ರೆಕ್ಕಿಂಗ್, ಹೈಕಿಂಗ್, ಪ್ಯಾರಾಗ್ಲೈಡಿಂಗ್ ಸೇರಿ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಮಾರ್ಚ್ನಿಂದ ಜೂನ್ ಸೂಕ್ತ ಸಮಯವಾಗಿದೆ
ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ. ಕಡಲತೀರಗಳನ್ನು ಇಷ್ಟಪಡುವವರು ಇಲ್ಲಿಗೆ ಹೋಗಬಹುದಾಗಿದೆ. ಲಕ್ಷದ್ವೀಪದಲ್ಲಿ ಅಗತ್ತಿ ವಿಮಾನ ನಿಲ್ದಾಣವಿದೆ. ಇಲ್ಲಿಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಸಂಪರ್ಕವಿದೆ. ಇಲ್ಲಿ ಅನೇಕ ರೀತಿಯ ಜಲ ಕ್ರೀಡೆಗಳನ್ನು ನೀವು ಆಡಬಹುದಾಗಿದೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಕೂಡ ಹನಿಮೂನ್ ಗೆ ಹೆಸರಾದ ಸ್ಥಳಗಳಲ್ಲಿ ಒಂದು. ಇಲ್ಲಿ ಎಕರೆಗಟ್ಟಲೆ ಚಹಾ ತೋಟಗಳಿವೆ. ಇಲ್ಲಿ ಯಾವಾಗಲೂ ಚಳಿಯ ವಾತಾವರಣವಿರುತ್ತದೆ. ಇಲ್ಲಿಂದ 70 ಕಿಲೋ ಮೀಟರ್ ದೂರದಲ್ಲಿ ಬಾಗ್ಡೋಗ್ರಾ ವಿಮಾನ ನಿಲ್ದಾಣವಿದೆ. ನಿಮಗೆ ಟ್ರೆಕ್ಕಿಂಗ್ ಮಾಡುವುದಕ್ಕೂ ಅವಕಾಶವಿದೆ.
ಕೇರಳವನ್ನು ದೇವರ ನಾಡು ಎಂದೂ ಕರೆಯಲಾಗುತ್ತದೆ. ಇದೂ ಕೂಡ ಹನಿಮೂನ್ ಸ್ಪಾಟ್. ಇಲ್ಲಿ ಅನೇಕ ಸರೋವರುಗಳು, ನದಿಗಳನ್ನು ನೀವು ನೋಡಬಹುದು. ಇಲ್ಲಿ ಬೋಟ್ ಹೌಸ್ಗಳು ಇದ್ದು, ನೀವು ನೀರಿನ ಮೇಲೆಯೇ ದಿನ ಕಳೆಯಬಹುದು. ಇಲ್ಲಿಗೆ ರೈಲು, ವಿಮಾನ, ಬಸ್ಸಿನ ಸಂಪರ್ಕವಿದೆ. ಕೇರಳದ ಕಡಲತೀರಗಳಲ್ಲಿ ಜಲ ಕ್ರೀಡೆಗಳನ್ನೂ ಆಡಬಹುದು. ಜೂನ್ನಿಂದ ಆಗಸ್ಟ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.