ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಆಸೆಯನ್ನು ಹೊಂದಿದ್ದೇನೆ ಅನ್ನುವ ವಿಚಾರವನ್ನು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
‘ನಾನು ಲೋಕಸಭಾ ಚುನಾವಣೆ (Lok Sabha Election 2024) ಆಕಾಂಕ್ಷಿ ಆಗಿದ್ದೇನೆ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister BS Yediyurappa) ಅವರ ನೆನಪು ಪಕ್ಷಕ್ಕೆ ಈಗ ಆಯಿತೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (Former minister MP Renukacharya) ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಏನು ಬೇಕಾದರೂ ಆಗಬಹುದು’ ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಗುರುಸಿದ್ದನಗೌಡ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ‘ದೇಶಕ್ಕೆ ಹೇಗೆ ನರೇಂದ್ರ ಮೋದಿ (PM Narendra MOdi) ಅವರೋ ಹಾಗೆಯೇ ರಾಜ್ಯಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿದ್ದಾರೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಹಾನ್ ನಾಯಕರು ಅವರು.
ವ್ಯವಸ್ಥಿತವಾಗಿ ಯಡಿಯೂರಪ್ಪ ಅವರನ್ನು ಇಳಿಸುವ ಕೆಲಸ ಮಾಡಿದ್ದರು. ಸಂಚು ಮಾಡಿ ಜೈಲಿಗೆ ಕಳುಹಿಸಿದರು. ನಮ್ಮವರೇ ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು. 2010-12ರಲ್ಲಿ ಆರೋಪವನ್ನು ಹೊರಿಸಿ ಜೈಲಿಗೆ ಕಳುಹಿಸಿದರು. ಆದರೆ, ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡಿದವರು ಯಾರಿಗೂ ನೋಟಿಸ್ ನೀಡಲಿಲ್ಲ’ ಎಂದು ಕಿಡಿಕಾರಿದರು.
ಸಾಕಷ್ಟು ಡ್ಯಾಮೇಜ್ ಆದ ಮೇಲೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದೆ ತರಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್ ವೈ ನೋಡದ ಹಳ್ಳಿ ಇಲ್ಲ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿಯನ್ನು ಗೆಲ್ಲೋಕೆ ಆಗದೇ ಇರುವವರು ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇವರ ಮುಖ ನೋಡಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಈಗ ಮತ ಬೇಕು ಎಂದು ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಾ ಇದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.