ನ್ಯೂಸ್ ನಾಟೌಟ್: ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬೆಂಗಳೂರು ನಗರದಲ್ಲಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೋಥೆಕ್ಗಳ ಮೇಲೆ ದಾಳಿ ನಡೆಸಿ ಕ್ರಮಕೈಕೊಂಡಿದ್ದಾರೆ.
ಪಬ್ಗಳಲ್ಲಿ ಶಾಲಾ – ಕಾಲೇಜುಗಳ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಸುತ್ತಿರುವ ಕುರಿತು ಖಾಸಗಿ ಶಾಲೆಗಳ ಒಕ್ಕೂಟವು (ಕ್ಯಾಮ್ಸ್) ಪೊಲೀಸ್ ಆಯುಕ್ತರು, ಗೃಹ ಸಚಿವರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದ ಅಧಿಕಾರಿಗಳ ತಂಡವು ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ, ಬಾಣಸವಾಡಿ, ಕೋರಮಂಗಲ, ಇಂದಿರಾ ನಗರ, ವೈಟ್ಫೀಲ್ಡ್ ಸೇರಿ ನಗರದ ವಿವಿದೆಡೆಯ 700ಕ್ಕೂ ಹೆಚ್ಚು ಪಬ್, ಬಾರ್ ಗಳಲ್ಲಿ ಶೋಧ ನಡೆಸಿದರು.
ತಡ ರಾತ್ರಿವರೆಗೂ ನಡೆದ ದಾಳಿಯಲ್ಲಿ ಮೂರು ಪಬ್ಗಳಲ್ಲಿ ಅಪ್ರಾಪ್ತರಿಗೆ ಮದ್ಯ ಪೂರೈಸುತ್ತಿರುವುದು ಗೊತ್ತಾಗಿದೆ. ಅಲ್ಲದೇ ಹಲವೆಡೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.
ಬಹುತೇಕ ಪಬ್ಗಳಲ್ಲಿ ‘ನೋ ಸ್ಮೋಕಿಂಗ್’ ವಲಯ ಹೊರತುಪಡಿಸಿ ಸಿಗರೇಟ್ ಸೇವನೆ, ಮೋಜು – ಮಸ್ತಿ ಮಾಡುವುದು ಗೊತ್ತಾಗಿದೆ. ಜತೆಗೆ, ನಿಯಮ ಉಲ್ಲಂಘಿಸಿ ಕಿವಿಗಡಚ್ಚಿಕ್ಕುವ ಅಬ್ಬರದ ಸಂಗೀತದ ಪಾರ್ಟಿಗಳು ನಡೆಯುತ್ತಿದ್ದವು. ಪೊಲೀಸರನ್ನು ಕಂಡ ತಕ್ಷಣವೇ ಸಂಗೀತವನ್ನು ನಿಲ್ಲಿಸಲಾಯಿತು. ನಶೆಯಲ್ಲಿದ್ದ ಹಲವರು ಗ್ರಾಹಕರು ಸ್ಥಳದಿಂದ ಓಡಿರುವುದಾಗಿ ವರದಿ ತಿಳಿಸಿದೆ.
ಕೆಲ ಪಬ್ಗಳಲ್ಲಿ ಪಾರ್ಟಿ ಮಾಡುತ್ತಿದ್ದ ಅಪ್ರಾಪ್ತರನ್ನು ವಿಚಾರಣೆ ನಡೆಸಲಾಯಿತು. ಆಗ ಕೆಲವರು ತಾವು ರಾಜಕಾರಣಿಗಳ ಸಂಬಂಧಿಗಳೆಂದು ಹೇಳಿಕೊಂಡು ನುಣುಚಿಕೊಳ್ಳಲು ಪ್ರಯತ್ನಿಸಿದರು. ಯುವತಿಯೊಬ್ಬಳು ತಾನು ಕಿರು ತೆರೆ ನಟಿ ಎಂದು ಹೇಳಿದಳು. ಅಪ್ರಾಪ್ತರಿಗೆ ಕಾನೂನಿನ ಪಾಠದ ಮೂಲಕ ಎಚ್ಚರಿಕೆ ನೀಡಲಾಯಿತು. ಮದ್ಯ ಪೂರೈಸುತ್ತಿದ್ದ ಪಬ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದರು.