ನ್ಯೂಸ್ ನಾಟೌಟ್ : ಕಳೆದ ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಾಳ ಎಂಬಲ್ಲಿ ನಡೆದ ಉಜಿರೆ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.ಸೌಜನ್ಯಳಿಗೆ ನ್ಯಾಯ ಸಿಗಬೇಕು,ಹಂತಕರು ಯಾರಿದ್ದಾರೋ ಅವರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಯಾಗಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.ಕೇವಲ ಪ್ರತಿಭಟನೆ ಮಾತ್ರವಲ್ಲ,ಇದೀಗ ಸೌಜನ್ಯಳ ನ್ಯಾಯಕ್ಕಾಗಿ ಬ್ಯಾನರ್ ಅಭಿಯಾನ ಆರಂಭಗೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಲ್ಲಲ್ಲಿ ಬ್ಯಾನರ್ಗಳು ಕಾಣಸಿಗುತ್ತಿವೆ.
ಆದರೆ ಸೌಜನ್ಯ ನ್ಯಾಯದ ಪರ ಹಾಕಲಾಗಿದ್ದ ಬ್ಯಾನರ್ ಗಳನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಕಿತ್ತೆಸೆದ ಘಟನೆಯೊಂದು ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಬೂಡುಜಾಲು ಸಮೀಪದ ನಿಡ್ಲೆ ಎಂಬಲ್ಲಿ ಈ ಘಟನೆ ವರದಿಯಾಗಿದೆ.
ಸೌಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆರೋಪಿ ಸಂತೋಷ್ ರಾವ್ ದೋಷಮುಕ್ತಗೊಂಡಿದ್ದರು. ಆದರೆ ನೈಜ ಆರೋಪಿಗಳ ಪತ್ತೆಗಾಗಿ ಹಾಗೂ ಮರುತನಿಖೆಗಾಗಿ ರಾಜ್ಯಮಟ್ಟದಲ್ಲಿ ಹೋರಾಟ ತೀವ್ರಗೊಂಡಿದೆ.ಇದರ ಪರವಾಗಿ ಜಿಲ್ಲೆಯ ಹಲವೆಡೆ ಬ್ಯಾನರ್ ಗಳನ್ನು ನಾಗರೀಕ ಸಮಾಜ ಹಾಕಿತ್ತು.ಆದರೆ ಬೂಡುಜಾಲಿನಲ್ಲಿ ಹಾಕಲಾಗಿದ್ದ ಬ್ಯಾನರ್ನ್ನು ರಾತ್ರೋ ರಾತ್ರಿ ಯಾರೋ ಕಿತ್ತು ಬಿಸಾಕಿದ್ದಾರೆ..!
ಈ ಕುರಿತಂತೆ ಅಲ್ಲಿಯ ನಾಗರಿಕರು ಆಕ್ರೋಶಿತರಾಗಿದ್ದಾರೆ.ಇದರ ವಿರುದ್ಧ ಹರಿಹಾಯ್ದ ನಾಗರಿಕರು ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈ ಕೃತ್ಯವೆಸಗಲಾಗಿದೆ ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಹರಿದ ಚಿತ್ರಗಳನ್ನು ಹರಿಯಬಿಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.