ನ್ಯೂಸ್ ನಾಟೌಟ್: ವೈದ್ಯ ಲೋಕವೇ ಅಚ್ಚರಿ ಪಡುವಂತಹಾ ಘಟನೆಯೊಂದು ನಡೆದಿದ್ದು, ಖಿನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಈ ಮಹಿಳೆಯಲ್ಲಿ ಖಿನ್ನತೆ ಮತ್ತು ಸ್ಮರಣ ಶಕ್ತಿ ಸಮಸ್ಯೆ ಕಂಡುಬಂದಿದ್ದರಿಂದ ಪರೀಕ್ಷೆ ನಡೆಸುವಾಗ ಹುಳು ಪತ್ತೆಯಾಗಿದೆ. ಬಳಿಕ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು ಜೀವಂತ ಹುಳುವನ್ನು ಹೊರತೆಗೆದಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಎಂಬಲ್ಲಿನ 64 ವರ್ಷದ ಮಹಿಳೆಯ ಮೆದುಳಿನಲ್ಲಿ 8 ಸೆ.ಮೀ ಉದ್ದದ ಜಂತು ಹುಳುವೊಂದು ಪತ್ತೆಯಾಗಿದ್ದು, ಸಜೀವವಾಗಿರುವ ಈ ಹುಳ ಮೆದುಳಿನಲ್ಲಿ ಪತ್ತೆಯಾಗಿರುವುದು ಜಗತ್ತಿನಲ್ಲಿಯೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಆಕೆಗೆ ಹೊಟ್ಟೆನೋವು, ಅತಿಸಾರ, ಜ್ವರ ಹಾಗೂ ರಾತ್ರಿ ವಿಪರೀತ ಬೆವರುವಿಕೆ ಸಮಸ್ಯೆ ಕಂಡುಬಂದಿದ್ದರಿಂದ 2021ರ ಜನವರಿಯಲ್ಲಿ ಮೊದಲ ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2022ರ ವೇಳೆಗೆ ಮೂರು ತಿಂಗಳ ಅವಧಿಯಲ್ಲಿ ಆಕೆಯ ರೋಗ ಲಕ್ಷಣಗಳು ಮತ್ತಷ್ಟು ಹದಗೆಟ್ಟಿತ್ತು.
ಆಕೆಯಲ್ಲಿ ವಿಪರೀತ ಮರೆವು ಹಾಗೂ ಖಿನ್ನತೆ ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರು ಮಹಿಳೆಯ ತಲೆಯ MRI ಸ್ಕ್ಯಾನ್ ಗೆ ಮುಂದಾಗಿದ್ದರು. ಮೆದುಳಿನ ಸ್ಕ್ಯಾನಿಂಗ್ ವೇಳೆ ಅಚ್ಚರಿ ಕಾದಿತ್ತು. ಸ್ಕ್ಯಾನ್ ನಡೆಸಿದಾಗ ಮೆದುಳಿನಲ್ಲಿ ಅಸಹಜತೆ ಪತ್ತೆಯಾಗಿತ್ತು. ಸುಮಾರು 8 ಸೆಂ.ಮೀ ಉದ್ದದ ಹುಳು ಕಂಡು ವೈದ್ಯರು ಅಚ್ಚರಿ ಪಟ್ಟಿದ್ದರು.
ಈ ಬಗ್ಗೆ ವೈದ್ಯರು ಮತ್ತಷ್ಟು ತನಿಖೆ ನಡೆಸಿದಾಗ ಈ ಹುಳ ಓಪಿಡಾಸ್ಕರಿಸ್ ರೋಬರ್ಟ್ಸಿ ನೆಮಾಟೋಡ್ ಎಂಬ ತಳಿಯ ಮೂರನೇ ಹಂತದ ಲಾರ್ವಾ ಎಂದು ಪತ್ತೆ ಮಾಡಿದ್ದಾರೆ.
ಈ ಹುಳುಗಳು ಸಾಮಾನ್ಯವಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿ ಹೆಚ್ಚಾಗಿ ಕಾಣಸಿಗುವ ಕಾರ್ಪೆಟ್ ಪೈಥಾನ್ ಎಂಬ ಹೆಬ್ಬಾವುಗಳ ಜಠರಗರುಳಿನ ವ್ಯವಸ್ಥೆಗಳಲ್ಲಿ ಕಂಡುಬರುತ್ತವೆ. ಓಪಿಡಾಸ್ಕರಿಸ್ ಲಾರ್ವಾಗಳು ಪ್ರಾಣಿಗಳ ದೇಹದೊಳಗೆ ಸುದೀರ್ಘ ಅವಧಿಯವರೆಗೂ ಉಳಿಯುವ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನಗಳು ಸಾಭೀತುಪಡಿಸಿವೆ ಎನ್ನಲಾಗಿದೆ.
ಹೆಬ್ಬಾವಿನ ಮಲದಿಂದ ಕಲುಷಿತಗೊಂಡ ಸ್ಥಳೀಯ ಹುಲ್ಲಿನ ಸಂಪರ್ಕಕ್ಕೆ ಬಂದಿದ್ದರಿಂದ ಮತ್ತು ಅದರಲ್ಲಿನ ಮೊಟ್ಟೆಗಳನ್ನು ಸೇವಿಸಿದ್ದರಿಂದ ಅದು ಮಹಿಳಾ ರೋಗಿಯೊಳಗೆ ಪ್ರವೇಶಿಸಿರಬಹುದು. ಹುಲ್ಲಿನ ಸಂಪರ್ಕಕ್ಕೆ ಬರುವ ಮೂಲಕ ರೋಗಿಯು ಆಹಾರ ಅಥವಾ ಅಡಿಗೆ ಪಾತ್ರೆಗಳಿಂದಾಗಿ ಅಥವಾ ಆ ಸ್ಥಳದಲ್ಲಿ ಬೆಳೆದ ಹಸಿರು ತರಕಾರಿ ಸೇವಿಸುವಾಗ ಅದರೊಟ್ಟಿಗೆ ಅದನ್ನೂ ಸೇವಿಸಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿದ್ದು ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.