ನ್ಯೂಸ್ ನಾಟೌಟ್ : ಸೌಜನ್ಯ ಪರ ನ್ಯಾಯದ ಕೂಗು ಎಲ್ಲ ಕಡೆ ಮಾರ್ಧನಿಸುತ್ತಿದೆ. ಪ್ರತಿಯೊಬ್ಬರ ಹೃದಯದಲ್ಲಿ ಸೌಜನ್ಯಳ ಸಾವಿನ ಹಿಂದಿರುವ ಕಾಣದ ಶಕ್ತಿಗಳ ಬಂಧನಕ್ಕೆ ಆಗ್ರಹ ಜೋರಾಗಿದೆ. ಸಾಲು ಸಾಲು ಪ್ರತಿಭಟನೆಗೆ ದಕ್ಷಿಣ ಕನ್ನಡ ಸಾಕ್ಷಿಯಾಗುತ್ತಿದೆ. ದಕ್ಷಿಣ ಕನ್ನಡ ಮಾತ್ರವಲ್ಲ ದೂರದ ಮುಂಬೈ, ಪುಣೆಯಲ್ಲೂ ಸೌಜನ್ಯ ನ್ಯಾಯದ ಘೋಷ ಮೊಳಗಿದೆ. ಸೌಜನ್ಯಳ ತಾಯಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವುದನ್ನು ಕೇಳಿ ಪ್ರತಿಯೊಬ್ಬರೂ ಕೂಡ ಕಣ್ಣೀರು ಹಾಕಿರುವುದನ್ನು ನೋಡಿದ್ದೇವೆ. ಆದರೆ ಮೊದಲ ಸಲ ಎಂಬಂತೆ ಸಾರ್ವಜನಿಕ ವೇದಿಕೆಯಲ್ಲಯೇ ಪೊಲೀಸ್ ಪೇದೆಯೊಬ್ಬರು ಕಣ್ಣೀರು ಹಾಕಿದ ಅಪರೂಪದ ಘಟನೆ ನಡೆದಿದೆ. ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.
ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಭಾನುವಾರ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಸಾರ್ವಜನಿಕ ಸಭೆ ನಡೆದಿತ್ತು. ಸಭೆಗೆ ಎಲ್ಲ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನ ನಿಯಂತ್ರಿಸುವುದಕ್ಕೆ ಬೆಳ್ತಂಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಹೀಗೆ ಬಂದೋ ಬಸ್ತ್ ಗಾಗಿ ಬಂದಿದ್ದ ಪೊಲೀಸ್ ಪೇದೆಯೊಬ್ಬರನ್ನು ವೇದಿಕೆಯಲ್ಲಿ ಗಣ್ಯರಿಗೆ ಭದ್ರತೆ ನೀಡುವುದಕ್ಕಾಗಿ ನಿಯೋಜಿಸಲಾಗಿತ್ತು. ಗಣ್ಯರು ತಮ್ಮ ಭಾಷಣಗಳಲ್ಲಿ ಸೌಜನ್ಯ ಹಂತಕರ ವಿರುದ್ಧ ಹರಿಹಾಯ್ದರು. ಕೂಡಲೇ ಬಂಧನವಾಗಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸೌಜನ್ಯ ಸಹೋದರಿಯರು ಪುಣ್ಯ ಕೋಟಿ ಹಸುವಿನ ಕಥೆಯನ್ನು ನೆನಪಿಸುವ ಹಾಡನ್ನು ಸೌಜನ್ಯಳ ಹೆಸರಲ್ಲಿ ಹಾಡಿದರು. ಈ ಹಾಡಿಗೆ ನೆರೆದಿದ್ದ ಪ್ರತಿಯೊಬ್ಬರ ಕಣ್ಣಾಲಿಗಳು ತೇವಗೊಂಡವು. ಈ ನಡುವೆ ವೇದಿಕೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ದುಃಖವನ್ನು ತಡೆದುಕೊಳ್ಳಲು ಆಗಲಿಲ್ಲ. ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಳ್ಳುತ್ತಲೇ ಹಾಗೆಯೇ ಕುಳಿತು ಬಿಟ್ಟರು. ಖರ್ಚಿಫ್ ಅನ್ನು ಅಡ್ಡ ಹಿಡಿದುಕೊಂಡು ಕಣ್ಣೀರು ಒರೆಸಿಕೊಂಡರು. ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಒಂದು ಕಡೆ ಸೌಜನ್ಯ ಪ್ರಕರಣವನ್ನು ಪೊಲೀಸರು ಹಳ್ಳ ಹಿಡಿಸಿದರು ಅನ್ನುವ ಆರೋಪಗಳು ಕೇಳಿ ಬರುತ್ತಿರುವಾಗ ಇನ್ನೊಂದು ಕಡೆ ಮಾನವೀಯ ಮೌಲ್ಯಗಳುಳ್ಳ ಪೊಲೀಸರು ಕೂಡ ಇದ್ದಾರೆ ಅನ್ನುವುದಕ್ಕೆ ಈ ಘಟನೆಯೊಂದು ಪ್ರತ್ಯಕ್ಷ ಸಾಕ್ಷಿಯಾಗಿದೆ.