ನ್ಯೂಸ್ ನಾಟೌಟ್: ಸಮುದ್ರ ವಿಹಾರಕ್ಕಾಗಿ ಮಂಗಳೂರಿನ ಸೋಮೇಶ್ವರ ಬೀಚ್ಗೆ ಬಂದಿದ್ದ ಐವರು ವೈದ್ಯರ ತಂಡದ ಪೈಕಿ ಓರ್ವ ವೈದ್ಯ ಸಮುದ್ರ ಪಾಲಾದ ಘಟನೆ ಭಾನುವಾರ ರಾತ್ರಿ ( ಸೆ.03) ನಡೆದಿದೆ. ಸಮುದ್ರ ಪಾಲಾದ ವೈದ್ಯನನ್ನು ಡಾ. ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಐವರು ವೈದ್ಯರ ತಂಡ ತಡರಾತ್ರಿ ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆಂದು ಬಂದಿದ್ದರು. ಈ ಸಂದರ್ಭ ಸೋಮೇಶ್ವರ ಬೀಚ್ನಲ್ಲಿ ಅಪಾಯಕಾರಿ ಸ್ಥಳವೆಂದೇ ಗುರುತಿಸಲಾಗಿರುವ ರುದ್ರಪಾದೆಯ ಮೇಲೆ ಏರಿದ್ದಾರೆ. ಈ ವೇಳೆ ಡಾ. ಪ್ರದೀಪ್ ಬಂಡೆಯ ಮೇಲಿಂದ ಜಾರಿ ಬಿದ್ದಿದ್ದು, ಬಳಿಕ ಅಲ್ಲಿದ್ದ ಬಂಡೆಯ ತುದಿಯನ್ನು ಹಿಡಿದು ಸಹಾಯಕ್ಕಾಗಿ ಯಾಚಿಸುತ್ತಿದ್ದರು. ಈ ಸಂದರ್ಭ ಪ್ರದೀಪ್ ಅವರನ್ನು ರಕ್ಷಿಸಲು ಡಾ. ಅಶೀಕ್ ಗೌಡ ಧಾವಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಕಾಲುಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಬಳಿಕ, ಕಲ್ಲುಗಳ ಆಸರೆ ಪಡೆದು ಡಾ. ಪ್ರದೀಪ್ ಮೇಲೆ ಬಂದು ತಕ್ಷಣ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಾ. ಆಶೀಕ್ ಗೌಡ ಅವರ ಮೃತದೇಹ ಸೋಮವಾರ (ಸೆ.4) ಮುಂಜಾನೆ ರುದ್ರಪಾದೆಯ ಸಮೀಪದಲ್ಲೇ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಹಿಂಬದಿಯಲ್ಲಿ ಸಮುದ್ರ ಕಿನಾರೆಯಲ್ಲಿ ಅತ್ಯಾಕರ್ಷಕವಾದ ನಿಸರ್ಗ ನಿರ್ಮಿತವಾದ ಶಿಲಾ ಸಮೂಹ ರುದ್ರಪಾದೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ರುದ್ರ ಅಂದರೆ ಭಗವಾನ್ ಶಿವ. ಪಾದೆ ಅಂದರೆ ತುಳುವಿನಲ್ಲಿ ಬಂಡೆ. ಹಾಗಾಗಿ ರುದ್ರಪಾದೆ ಎಂಬ ಹೆಸರು ಬಂದಿದೆ. ಈ ರುದ್ರಪಾದೆಯಲ್ಲಿ ಕುಳಿತು ಸಮುದ್ರ ತೆರೆಗಳ ನರ್ತನಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಪಾಯವನ್ನೂ ಲೆಕ್ಕಿಸದೆ ಈ ಅಪಾಯಕಾರಿ ಬಂಡೆಯ ಬದಿಗೆ ತೆರಳುತ್ತಾರೆ. ಆದರೆ ಈ ಬಂಡೆಯ ಬದಿಗಳಲ್ಲಿ ಭಾರಿ ಆಳವಿದ್ದು, ಹಲವಾರು ಅವಘಡಗಳು ಸಂಭವಿಸದರೂ ಪ್ರವಾಸಿಗರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಮುದ್ರ ತೀರಗಳಲ್ಲಿ ಸೂಚನಫಲಕಗಳನ್ನೂ ಅಳವಡಿಸದರೂ ಯಾರೂ ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಅವಘಡಗಳು ನಿರಂತರವಾಗಿ ಸಂಭವಿಸುತ್ತಿದೆ.