ನ್ಯೂಸ್ ನಾಟೌಟ್ : ರಾಜ್ಯ ರಾಜಕೀಯದಲ್ಲಿ ವರ್ಗಾವಣೆ (Government Transfer) ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.ಸಾಕಷ್ಟು ಬಿರುಗಾಳಿಯನ್ನು ಎಬ್ಬಿಸಿದ್ದ ಈ ಸುದ್ದಿಗೆ ಸಚಿವರ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನವನ್ನು ಹೊರಹಾಕಿದ್ದರು.ಹೌದು,ಕಾಂಗ್ರೆಸ್ ಸರ್ಕಾರಕ್ಕೆ (Congress Government) ತೀವ್ರ ಮುಜುಗರವನ್ನು ತಂದೊಡ್ಡುವಂತೆ ಮಾಡಿದ್ದ ಈ ವಿಚಾರಕ್ಕೆ ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಮನಗಂಡಿದ್ದು, “ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಆಗಬೇಕು ಎಂದಾದರೆ ಅದಕ್ಕೆ ಸಿಎಂ ಅನುಮತಿ ಕಡ್ಡಾಯ (CM permission mandatory)” ಎಂದು ಹೇಳಲಾಗಿದೆ.ಈ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಕಾರ್ಯದರ್ಶಿಯವರಿಂದ ಸುತ್ತೋಲೆಯನ್ನೂ ಹೊರಡಿಸಲಾಗಿದೆ.
ಈ ಆದೇಶವನ್ನು ಪಾಲಿಸದೇ ಇದ್ದಲ್ಲಿ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದು,ಸಿಎಂ ಪೂರ್ವಾನುಮತಿ ಪಡೆಯದೇ ವರ್ಗಾವಣೆ ಮಾಡುವ ಹಾಗಿಲ್ಲ.ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಗಮನಕ್ಕೆ ಬಂದಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಇಲಾಖೆ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ. ಅಂಥ ಪ್ರಕರಣಗಳಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೆಲವರು ವರ್ಗಾವಣೆ ಮಾಡಿ ನಂತರ ಸಿಎಂ ಅನುಮತಿ ಪಡೆಯಲು ಮುಂದಾಗಬಹುದು.ಆದರೆ ಅದಕ್ಕೂ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಎಲ್ಲ ಇಲಾಖೆಗಳ ಎ, ಬಿ, ಸಿ, ಡಿ ದರ್ಜೆಗಳ ನೌಕರರ ವರ್ಗಾವಣೆಗೆ ಈ ಆದೇಶ ಅನ್ವಯವಾಗಲಿದ್ದು, ಎಲ್ಲ ಇಲಾಖೆಗಳಿಗೂ ಕಟ್ಟುನಿಟ್ಟಿನ ಆದೇಶ ಪಾಲನೆಗೆ ತಾಕೀತು ಮಾಡಲಾಗಿದೆ.
ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆದೇಶದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.ಈ ಮೊದಲು ಜೂನ್ 1ರಿಂದ ಜುಲೈ 3ರ ವರೆಗೆ ಶೇಕಡಾ 6 ರಷ್ಟು ಮೀರದಂತೆ ಗ್ರೂಪ್ ಎ, ಬಿ, ಸಿ, ಡಿ ವರ್ಗದ ಅಧಿಕಾರಿಗಳು, ನೌಕರರ ವರ್ಗಾವಣೆಗೆ ಅವಕಾಶ ನೀಡಿ ಆಯಾ ಇಲಾಖೆಯ ಸಚಿವರಿಗೆ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ವರ್ಗಾವಣೆ ಪ್ರಕ್ರಿಯೆಗಳು ನಡೆದಿದ್ದವು. ಕೆಲವು ಇಲಾಖೆಗಳಲ್ಲಿ ಸಿಎಂ ಅನುಮತಿಯನ್ನು ಪಡೆಯದೇ ವರ್ಗಾವಣೆ ಮಾಡಿ, ಬಳಿಕ ಅನುಮೋದನೆಯನ್ನು ಪಡೆಯಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ನೂತನ ಆದೇಶವನ್ನು ಹೊರಡಿಸಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.